ಲಾಕ್ಡೌನ್ನಲ್ಲಿ ನಮ್ಮಂತೆ ಪ್ರಾಣಿಗಳೂ ಕೂಡ ಸಂಕಷ್ಟದಲ್ಲಿವೆ. ಹೀಗಾಗಿ ಕರ್ನಾಟಕದ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯಿರಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದರು. ಯಜಮಾನನ ಕರೆ ಸ್ಪಂದಿಸಿರೋ ಡಿ ಬಾಸ್ ಫ್ಯಾನ್ಸ್ ಕರ್ನಾಟಕದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಇದೂವರೆಗೂ ಅಭಿಮಾನಿಗಳು ದತ್ತು ಪಡೆಯಲು ನೀಡಿದ ಹಣದ ಮೊತ್ತಕ್ಕೆ ಮೃಗಾಲಯದ ಅಧಿಕಾರಿಗಳು ಫುಲ್ ಖುಷಿಯಾಗಿದ್ದಾರೆ.
ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿರುವ ಸುಮಾರು 9 ಮೃಗಾಲಯಗಳಲ್ಲಿ ದರ್ಶನ್ ಅಭಿಮಾನಿಗಳು ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಝೂ ಆಫ್ ಕರ್ನಾಟಕದ ಈ ಅಭಿಯಾನದಲ್ಲಿ ದರ್ಶನ್ ಅಭಿಮಾನಿಗಳು ಮುಗಿಬಿತ್ತು ಪ್ರಾಣ, ಪಕ್ಷಿಗಳನ್ನು ದತ್ತು ಪಡೆದಿರೋದು ಈ ಅಂಕಿ ಅಂಶಗಳಿಂದ ಗೊತ್ತಾಗಿದೆ. ಕೇವಲ 2 ದಿನಗಳಲ್ಲಿ ₹25 ಲಕ್ಷ ಹಣವನ್ನು ಸಂಗ್ರಹಿಸಲಾಗಿದೆ.
ಮೈಸೂರು ಝೂ ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿ ಅತೀ ಹೆಚ್ಚು ಪ್ರಾಣಿ ಹಾಗೂ ಪಕ್ಷಿಗಳನ್ನು ದತ್ತು ಪಡೆದಿದ್ದಾರೆ. ಮೈಸೂರಿನಲ್ಲಿ ಮೃಗಾಲಯದಲ್ಲಿ ₹13.66 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದ್ದರೆ, ಬನ್ನೇರುಘಟ್ಟದಲ್ಲಿ ₹7.30 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಉಳಿದಂತೆ ಶಿವಮೊಗ್ಗ ಝೂನಲ್ಲಿ ₹1 ಲಕ್ಷ ಸೇರಿದಂತೆ ಕಲಬುರಗಿ, ಗದಗ, ಹಂಪಿ ಮೃಗಾಲಯದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ.