ಕನ್ನಡ ಚಿತ್ರಗಳು ನಿಧಾನಕ್ಕೆ ತಮ್ಮ ಮಾರುಕಟ್ಟೆ ವಿಸ್ತರಿಸಿಕೊಳ್ತಾ ಇವೆ. ಭಾಷೆ, ರಾಜ್ಯಗಳ ಗಡಿ ಮೀರಿ ಬೆಳೆಯುತ್ತಿವೆ. ಪ್ಯಾನ್ ಇಂಡಿಯಾ ರಿಲೀಸ್ ಅನ್ನೋದು ಚಿತ್ರರಂಗದಲ್ಲಿ ಸರ್ವೇಸಾಮಾನ್ಯ ಎನ್ನುವಂತೆ ಆಗ್ತಿದೆ. ಇಂಥಾ ಟೈಮಲ್ಲೇ ಕನ್ನಡ ಚಿತ್ರಗಳು ಕೂಡಾ ತಮ್ಮ ವಹಿವಾಟನ್ನು ಬೇರೆ ಭಾಷೆಗಳಿಗೆ ವಿಸ್ತರಿಸ್ತಾ ಇವೆ. ಕೆಜಿಎಫ್ ಕನ್ನಡದ ಮೊಟ್ಟಮೊದಲ ಪ್ಯಾನ್ ಇಂಡಿಯಾ ರಿಲೀಸ್ ಚಿತ್ರ. ಆದ್ರೆ ತೆಲುಗು, ತಮಿಳು ಸೇರಿದಂತೆ ಬೇರೆ ಭಾಷೆಗಳಲ್ಲಿ ಕನ್ನಡ ಚಿತ್ರಗಳ ಡಬ್ಬಿಂಗ್ ವರ್ಶನ್ ಗಳು ಇತ್ತೀಚೆಗೆ ಯಶಸ್ಸು ಕಾಣುತ್ತಿವೆ.


ಧೃವ ಸರ್ಜಾ ಅಭಿನಯದ ಪೊಗರು, ಚಾಲೆಂಜಿಂಗ್ ಸ್ಟಾರ್ ದರ್ಶನ್ ನ ರಾಬರ್ಟ್ ಇತ್ತೀಚೆಗೆ ತೆಲುಗಿನಲ್ಲೂ ತಕ್ಕಮಟ್ಟಿಗೆ ಸದ್ದು ಮಾಡಿರುವ ಕನ್ನಡ ಸಿನಿಮಾಗಳು. ಈಗ ಈ ಸಾಲಿಗೆ ಕನ್ನಡದ ಮತ್ತೊಂದು ದೊಡ್ಡ ಸಿನಿಮಾ ಸೇರಿಕೊಳ್ಳಲು ಸಜ್ಜಾಗಿದೆ. ಅದೇ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ. ತೆಲುಗು ವಿತರಕರು ಯುವರತ್ನ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರಂತೆ. ಹಾಗಾಗಿ ಯುವರತ್ನ ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಸದ್ದು ಮಾಡೋಕೆ ಸಜ್ಜಾಗಿದೆ.


ಇನ್ನು ಇದೇ ಹಾದಿ ತುಳಿಯುತ್ತಿರೋದು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3. ಕನ್ನಡದಲ್ಲಿ ಈ ಚಿತ್ರ ಬಿಡುಗಡೆಯಾದ ದಿನವೇ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಈಗಾಗಲೇ ಕೋಟಿಗೊಬ್ಬ 3 ತೆಲುಗು ವರ್ಶನ್ ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ತೆಲುಗಿನಲ್ಲಿ ಈ ಚಿತ್ರ ‘K3 ಕೋಟಿಗೊಕ್ಕಡು’ ಎನ್ನುವ ಹೆಸರಲ್ಲಿ ರಿಲೀಸ್ ಆಗಲಿದೆ. ಗುಡ್ ಸಿನಿಮಾ ಗ್ರೂಪ್ ಈ ಚಿತ್ರದ ಡಬ್ಬಿಂಗ್ ಹಕ್ಕನ್ನು ಮಾರಾಟ ಮಾಡಿದೆ. ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.
ತೆಲುಗು ವೀಕ್ಷಕರಿಗೆ ಸುದೀಪ್ ಹೊಸಬರಲ್ಲ. ಎಸ್ ಎಸ್ ರಾಜಮೌಳಿಯ ‘ಈಗ’ ಸೇರಿದಂತೆ ಸುದೀಪ್ ತೆಲುಗಿನಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಾಗಾಗಿ ಸುದೀಪ್ ಸಿನಿಮಾಗಳಿಗೆ ಅಲ್ಲಿ ಒಳ್ಳೆ ಮಾರುಕಟ್ಟೆ ಇದ್ದೇ ಇದೆ ಎನ್ನುವ ಲೆಕ್ಕಾಚಾರ ತಯಾರಕರದ್ದು. ಒಟ್ನಲ್ಲಿ ಕನ್ನಡ ಚಿತ್ರಗಳು ಬೇರೆ ಭಾಷೆಗಳಲ್ಲೂ ಸದ್ದು ಮಾಡ್ತಿರೋದು ಒಳ್ಳೆ ಬೆಳವಣಿಗೆಯೇ.