ಹೊಂಬಾಳೆ ಫಿಲಂಸ್ ನಿರ್ಮಿಸಿರೋ ಮತ್ತೊಂದು ಸಿನಿಮಾ ಯುವರತ್ನ. 2020 ಮಾರ್ಚ್ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಸಿನಿಮಾ ಯುವರತ್ನ ರಿಲೀಸ್ ಆಗ್ಬೇಕಿತ್ತು. ಆದ್ರೆ, ಕೊರೊನಾ ಹಾವಳಿಯಿಂದ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಕೊನೆಗೂ ಯುವರತ್ನ ರಿಲೀಸ್ ಡೇಟ್ ಅನೌನ್ಸ್ ಆದಾಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಅಪ್ಪು ಅಭಿಮಾನಿಗಳು.
ಪುನೀತ್ ರಾಜ್ ಕುಮಾರ್ ಸಿನಿಮಾ ಯುವರತ್ನ ಬಿಡುಗಡೆಗೆ ಇನ್ನು ಕೇವಲ ಒಂದು ತಿಂಗಳು ಬಾಕಿಯಿದೆ. ಆಗ್ಲೇ ಯುವರತ್ನ ಪ್ರಚಾರ ಮಾಡೋ ಕೆಲಸ ಬರದಿಂದ ಸಾಗಿದೆ. ಟೀಸರ್, ಸಾಂಗ್ ಅಂತ ಬಿಡುಗಡೆಯಾಗುತ್ತಲೇ ಇದೆ. ಅದ್ರಲ್ಲೂ ಕೆಲ ದಿನಗಳ ಹಿಂದೆ ರಿಲೀಸ್ ಆದ ಊರಿಗೊಬ್ಬ ರಾಜ ಸಾಂಗ್ ಈಗ ಅಪ್ಪು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಊರಿಗೊಬ್ಬ ರಾಜ.. ರಾಜಂಗೊಬ್ಳು ರಾಣಿ ಅನ್ನೋ ಹಾಡನ್ನ ಯುವರತ್ನ ತಂಡ ರಿಲೀಸ್ ಮಾಡಿದೆ. ಆದರೆ, ಈ ಹಾಡು ಅಪ್ಪು ಫ್ಯಾನ್ಸ್ಗಳಿಗೆ ಇಷ್ಟನೇ ಆಗಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಅಭಿಮಾನಿಗಳು ಹಾಡಿನ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.
ಊರಿಗೊಬ್ಬ ರಾಜ ಹಾಡಿನಲ್ಲಿ ಏನಂದ್ರೆ ಏನೂ ಚೆನ್ನಾಗಿಲ್ಲ. ಪುನೀತ್, ಸಯೇಷಾ ಸೈಗಲ್ ಡ್ಯಾನ್ಸ್ ಅಷ್ಟೇ ಇಷ್ಟ. ಸೆಟ್ಟು ಅತ್ಯದ್ಭುತವಾಗಿದೆ. ಅದು ಬಿಟ್ರೆ ಏನೂ ಚೆನ್ನಾಗಿಲ್ಲ. ಅಪ್ಪು ಇದು ನಿಮ್ಮ ರೇಂಜಿಗೆ ಮಾಡಿದ ಸಾಂಗ್ ಅಲ್ವೇ ಅಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದ್ಕಡೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರೂ ಯುವರತ್ನ ತಂಡ ಮಾತ್ರ ಇದೂವರೆಗೂ ಪ್ರತಿಕ್ರಿಯೆ ನೀಡಿಲ್ಲ. ಪುನೀತ್ ಫ್ಯಾನ್ಸ್ ಅನ್ನ ಸಮಾಧಾನ ಪಡಿಸೋಕೆ ಯುವರತ್ನ ಏನ್ ಮಾಡುತ್ತೆ? ಹೊಸ ಹಾಡನ್ನೇನಾದ್ರೂ ಶೂಟ್ ಮಾಡ್ತಾರಾ? ಇಲ್ವಾ ಅಭಿಮಾನಿಗಳ ಬೇಸರದ ನಡುವೆಯೂ ಇದೇ ಹಾಡನ್ನ ಇಟ್ಕೊಳ್ತಾರಾ ಅನ್ನೋ ಕುತೂಹಲ ದುಪ್ಪಟ್ಟಾಗಿದೆ.