ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚಿತ್ರ ನೋಡಿದವರೆಲ್ಲಾ ಬಹಳ ಮೆಚ್ಚುಗೆಯಿಂದಲೇ ಮಾತನಾಡಿದ್ದಾರೆ. ಆದ್ರೆ ಕೊರೊನಾ ಹೊಡೆತ ಯುವರತ್ನ ಪಾಲಿಗೆ ಬಹಳ ಕೆಟ್ಟದಾಗೇ ಇದೆ. ಮೊದಲು ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆಯುವುದರಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ಥಿಯೇಟರ್ಗಳಲ್ಲಿ ಶೇಕಡಾ 50ರಷ್ಟು ಸೀಟುಗಳಿಗೆ ಮಾತ್ರ ಅವಕಾಶ ಎಂದು ಘೋಷಿಸಿತ್ತು. ಮೊದಲೇ ಈ ನಿರ್ಧಾರದ ಬಗ್ಗೆ ತಿಳಿಸಿದ್ರೆ ಚಿತ್ರವನ್ನು ಬಿಡುಗಡೆಯೇ ಮಾಡುತ್ತಿರಲಿಲ್ಲ, ಈಗ ನಿರ್ಮಾಪಕರು, ವಿತರಕರು ಎಲ್ಲರೂ ಪರದಾಡಬೇಕಾಗಿದೆ ಎಂದು ನಾಯಕ ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಸರ್ಕಾರಕ್ಕೆ ಮನವಿ ಮಾಡಿತು. ಪರಿಣಾಮವಾಗಿ ಮತ್ತೆ 3 ದಿನಗಳವರಗೆ ಚಿತ್ರಮಂದಿರಗಳಲ್ಲಿ ಶೇಕಡಾ 100ರಷ್ಟು ಪ್ರೇಕ್ಷಕರು ಚಿತ್ರ ವೀಕ್ಷಿಸಲು ಅನುಮತಿ ನೀಡಲಾಗಿತ್ತು.ಅಂತೂ ಏನೋ ಒಂದು ಗಂಡಾಂತರದಿಂದ ಸದ್ಯಕ್ಕೆ ಪಾರಾಗಿದ್ದೇವೆ ಎಂದು ಸ್ವಲ್ಪಮಟ್ಟಿಗೆ ಚಿತ್ರತಂಡ ನಿರಾಳವಾಗಿತ್ತು.
ಇದ್ದ ಶೇಕಡಾ 50ರಷ್ಟು ಸೀಟುಗಳಲ್ಲೇ ಜನ ಖುಷಿಯಿಂದ ಬಂದು ಸಿನಿಮಾ ನೋಡುತ್ತಿದ್ದಾರೆ. ಆದ್ರೆ ಈಗ ಕೊರೊನಾ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕರ್ನಾಟಕದ 7 ಜಿಲ್ಲೆಗಳ 8 ನಗರಗಳಲ್ಲಿ ಏಪ್ರಿಲ್ 10ರಿಂದ 20ರವರಗೆ ನೈಟ್ ಕರ್ಫ್ಯೂ ಬೇರೆ ಘೋಷಣೆಯಾಗಿದೆ. ಇನ್ನು ಕಾಯೋದು ವೇಸ್ಟ್ ಎನಿಸಿದ್ದೇ ಯುವರತ್ನವನ್ನು ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿಬಿಟ್ಟಿದೆ.
ಏಪ್ರಿಲ್ 9 ನೇ ತಾರೀಖು ಜನರೆಲ್ಲಾ ತಂತಮ್ಮ ಮನೆಗಳಲ್ಲೇ ಕುಳಿತು ಯುವರತ್ನ ಚಿತ್ರವನ್ನು 5 ಭಾಷೆಗಳಲ್ಲಿ ವೀಕ್ಷಿಸುವ ಅವಕಾಶ ಸಿಗಲಿದೆ.ಆದ್ರೆ ಈ ಬೆಳವಣಿಗೆ ಬಗ್ಗೆ ಅಪ್ಪು ಅಭಿಮಾನಿಗಳು ಮಾತ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟು ಒಳ್ಳೆ ಸಿನಿಮಾ ಒಂದೇ ವಾರಕ್ಕೆ ಯಾಕೆ OTTಯಲ್ಲಿ ಬಿಡುಗಡೆ ಮಾಡ್ತಿದ್ದೀರಾ, ಶೇಕಡಾ 50ರಷ್ಟು ಸೀಟುಗಳು ಮಾತ್ರವೇ ಅವಕಾಶ ಇದ್ದರೂ ಜನ ಆಸಕ್ತಿಯಿಂದ ಚಿತ್ರಮಂದಿರಗಳಿಗೆ ಬರ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಮೂಲಗಳ ಪ್ರಕಾರ ಇಷ್ಟು ಬೇಗನೇ ಸ್ಟಾರ್ ಸಿನಿಮಾವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಅಮೇಜಾನ್ ಪ್ರೈಮ್ ಭಾರೀ ಮೊತ್ತವನ್ನೇ ಪಾವತಿಸಿದೆ ಎನ್ನುವ ಮಾತುಗಳೂ ಕೇಳಿಬರ್ತಿವೆ.
ಈ ಅವಕಾಶವನ್ನೂ ಬಳಸಿಕೊಳ್ಳದಿದ್ರೆ, ಮುಂದೆ ಪರಿಸ್ಥಿತಿ ಕೈಮೀರಿ ಲಾಕ್ ಡೌನ್ ಆಗಿಬಿಟ್ರೆ ಇನ್ನೂ ನಷ್ಟವಾಗುವ ಅಪಾಯವಿದೆ ಎಂದು ಚಿತ್ರತಂಡ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ. ಒಟ್ನಲ್ಲಿ ಥಿಯೇಟರ್ ನಲ್ಲಿ ಮಿಸ್ ಆದ್ರೂ ಮನೆಯಲ್ಲೇ ಕುಳಿತು ಅಪ್ಪು ಸಿನಿಮಾ ಎಂಜಾಯ್ ಮಾಡೋ ಅವಕಾಶವಂತೂ ಜನರಿಗೆ ಬಂಪರ್ ಆಫರ್ ರೀತಿಯಲ್ಲಿ ಸಿಕ್ಕಿದೆ