ಭಾಷಾಭಿಮಾನ ತಮಿಳರ ರಕ್ತದಲ್ಲಿಯೇ ಬಂದಿದೆ ಅಂತಾರೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕಡೆ ಹಿಂದಿ ಹೇರಿಕೆಗೆ ಪ್ರಯತ್ನ ಪಡುತ್ತಲೇ ಇದೆ. ಇದಕ್ಕೆ ನಮ್ಮ ಸಂಸದರೇ ಬೆಂಬಲವಾಗಿ ನಿಂತಿದ್ದಾರೆ. ಆದ್ರೆ,ಇವತ್ತಿಗೂ ತಮಿಳುನಾಡಿನಲ್ಲಿ ಹಿಂದಿ ಹೇರಲು ಕೇಂದ್ರ ಸರ್ಕಾರ ಮೀನಾ ಮೇಷ ಎಣಿಸುತ್ತೆ. ಅದನ್ನ ಪಕ್ಕಕ್ಕಿದ್ರೆ, ಸದ್ಯ ಕನ್ನಡದ ‘ಯುವರತ್ನ’ ಸಿನಿಮಾ ಸಂಭಾಷಣೆ ತಮಿಳರ ಮೆಚ್ಚುಗೆಗೆ ಪಾತ್ರವಾಗಿದೆ. ಪುನೀತ್ ರಾಜ್ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಇತ್ತ ಥಿಯೇಟರ್ನಲ್ಲೂ ಅತ್ತ ಅಮೇಜಾನ್ ಪ್ರೈಂನಲ್ಲೂ ಸಖತ್ ಸೌಂಡ್ ಮಾಡ್ತಿದೆ. ಅದ್ರಲ್ಲೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸದ್ಯದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಚರ್ಚಿಸಿರೋ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ನಿರ್ದೇಶಕರು ಬರೆದಿರೋ ಸಂಭಾಷಣೆ ನಿಜಕ್ಕೂ ಅದ್ಭುತ.
‘ಯುವರತ್ನ’ ಚಿತ್ರದ ಸಂಭಾಷಣೆ ತಮಿಳರ ಮನ ಗೆದ್ದಿದೆ. ಚಿತ್ರದಲ್ಲಿ ಕನ್ನಡ ಭಾಷೆ, ಭಾಷಾಭಿಮಾನ ಬಗ್ಗೆ ಸಂತೋಷ್ ಆನಂದ್ ರಾಮ್ ಬರೆದಿರೋ ಸಂಭಾಷಣೆಗೆ ತಮಿಳರು ಮನಸೋತಿದ್ದು, ಹಾಡಿ ಕೊಂಡಾಡಿದ್ದಾರೆ. ತಮಿಳುನಾಡಿನ ಫೇಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿರೋ ಪೋಸ್ಟ್ನಲ್ಲಿ ನಮ್ಮ ಭಾಷಾಭಿಮಾನವನ್ನ ಹಾಡಿ ಹೊಗಳಿದ್ದಾರೆ ನೋಡಿ. ಈ ಪೋಸ್ಟ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆರ್ಕೆ ಯೂನಿವರ್ಸಿಟಿ ಪ್ರಿನ್ಸಿಪಲ್ ಗುರುದೇವ್ ದೇಶ್ಮುಖ್ (ಪ್ರಕಾಶ್ ರೈ) ಹೇಳುವ ‘ನಮ್ಮ ಮತ ಇಂಡಿಯಾ ನಮ್ಮ ಜಾತಿ ಕನ್ನಡ’ ಡೈಲಾಗ್ ಅದ್ರಲ್ಲಿ ಒಂದು. ಇನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರೊಫೆಸರ್(ಸುಧಾರಾಣಿ)ಗೆ ‘ಮೇಡಮ್ ಕನ್ನಡದಲ್ಲಿ ಒಮ್ಮೆ ಎಕ್ಸ್ಪ್ಲೇನ್ ಮಾಡ್ತೀರಾ’ ಅಂತ ಕೇಳುವ ದೃಶ್ಯ ಇದೆ. ಕನ್ನಡ ಮೀಡಿಯಂ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಬರೀ ಇಂಗ್ಲೀಷ್ನಲ್ಲಿ ಪಾಠ ಮಾಡಿದ್ರೆ ಅರ್ಥ ಆಗೋದಿಲ್ಲ. ಕಾಲೇಜಿನಲ್ಲಿ ಕನ್ನಡದಲ್ಲಿ ಯಾಕೆ ಪಾಠ ಮಾಡಬಾರದು. ಕನ್ನಡ ಮೀಡಿಯಂ ವಿದ್ಯಾರ್ಥಿಗಳು ಒಬ್ಬರಿರ್ಲಿ, ಇಬ್ಬರಿರ್ಲಿ ಕನ್ನಡದಲ್ಲೂ ಪಾಠ ಮಾಡಿ ಅನ್ನೋ ಕಳಕಳಿ ಇದ್ರಲ್ಲಿದೆ.
ಪ್ರೊಫೆಸರ್ಸ್ ಮೀಟಿಂಗ್ನಲ್ಲಿ ‘ಎಲ್ಲವನ್ನೂ ಕನ್ನಡದಲ್ಲಿ ಹೇಳಿಕೊಟ್ಟರೆ ಹೇಗೆ ಇಂಪ್ರೂ ಆಗ್ತಾರೆ’ ಅಂತ ಪ್ರೊಫೆಸರ್ ಹೇಳ್ದಾಗ ‘ ವಿದ್ಯಾರ್ಥಿಗಳು ಕನ್ನಡದಲ್ಲಿ ಕಲಿಸಿಕೊಡಿ ಅಂತ ಕೇಳಿದಾಗ ನಾವು ಕನ್ನಡದಲ್ಲಿ ಕಲಿಸಬೇಕು, ಇಂಗ್ಲೀಷ್ ಒಂದು ಭಾಷೆ ಅಷ್ಟೆ, ಜ್ಞಾನ ಅಲ್ಲ’ ಅಂತ ಮತ್ತೊಬ್ಬ ಪ್ರೊಫೆಸರ್ ಯುವರಾಜ್ (ಪುನೀತ್ ರಾಜ್ಕುಮಾರ್) ಎಲ್ಲರಿಗೂ ಕನ್ನಡ ಭಾಷೆಯ ಮಹತ್ವ ಮತ್ತು ಅಗತ್ಯತೆಯ ನೀತಿಪಾಠ ಮಾಡ್ತಾರೆ. ಇಂತಹ ಸಂಭಾಷಣೆಗಳೇ ಈಗ ತಮಿಳರಿಗೂ ಜ್ಞಾನೋದಯ ಆಗುವಂತೆ ಮಾಡಿದೆ. ‘ಕನ್ನಡಿಗರು ಎಷ್ಟು ಭಾಷಾಭಿಮಾನ ಮತ್ತು ಒಗ್ಗಟ್ಟನ್ನ ಅವರ ಭಾಷೆ ಬಗ್ಗೆ ತೋರಿಸಿದ್ದಾರೆ ಅನ್ನದನ್ನ ನಾವು ನೋಡಿ ಕಲಿಯಬೇಕು’ ಅಂತ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಇದೇ ಅಲ್ಲವೇ ನಿಜವಾದ ಸಿನಿಮಾ ಸಕ್ಸಸ್ ಅಂದ್ರೆ.