ಮೊನ್ನೆ ನಟ ಜಗ್ಗೇಶ್ ಅವರ ಕಿರಿಮಗ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಜುಲೈ 1ರಂದು ಚಿಕ್ಕಬಳ್ಳಾಪುರದ ಬಳಿ ಅಪಘಾತಕ್ಕೀಡಾಗಿತ್ತು. ರಸ್ತೆ ವಿಭಜಕಕ್ಕೆ ಗುದ್ದಿದ ರಭಸಕ್ಕೆ BMW ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು. ಪುಣ್ಯ ಅಂದ್ರೆ ಸಮಯಕ್ಕೆ ಸರಿಯಾಗಿ ಏರ್ಬ್ಯಾಗ್ ಓಪನ್ ಆಗಿದ್ದರಿಂದ ಯತಿರಾಜ್ ಪ್ರಾಣಕ್ಕೆ ಅಪಾಯವಾಗಿಲ್ಲ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಅಪಘಾತದ ನಂತರ ಯತಿರಾಜ್ ನಡೆದುಕೊಂಡ ರೀತಿ ಎಂಥಹವರಿಗೂ ಅನುಮಾನ ಹುಟ್ಟಿಸುತ್ತದೆ. ಕೆಲವರು ಕುಡಿದ ಮತ್ತಿನಲ್ಲಿ ಯತಿ ಅಪಘಾತವಾಗಿದೆ ಅಂದ್ರೆ, ಮತ್ತೆ ಕೆಲವರು ಗಾಂಜಾ, ಡ್ರಗ್ಸ್ ಏನೋ ಒಟ್ಟಿನಲ್ಲಿ ಯಾವುದೋ ಮತ್ತಿನಲ್ಲಿ ಹೀಗೆ ಆಗಿದೆ ಅಂತಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಮಾತ್ರ ಏನು ಹೇಳಿಲ್ಲ. ಹಂಗಾಗಿ ಜನ ಮಾತಾಡೋದು ಸುಳ್ಳು ಇರಬಹುದು. ಯತಿರಾಜ್ ಆಸ್ಪತ್ರೆಯಿಂದ ಹೊರ ಬಂದ ರೀತಿ ನೋಡಿದ್ರೆ, ಟಿಷ್ಕಾಂವ್ ಅಂತ ಕಾರು ಹಾರ್ತು ಅಂತ ಹೇಳಿದ ರೀತಿ ನೋಡಿದ್ರೆ, ಎಂತಹವರಿಗೂ ಅನುಮಾನ ಬರುತ್ತೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅಪಘಾತವಾದ ಬಳಿಕ ಯಾವ್ದೋ ಎಸ್ಟೇಟ್ ಒಳಗೆ ಹೋಗಿ ಯತಿರಾಜ್ ಚಿತ್ರ ವಿಚಿತ್ರವಾಗಿ ತೋರಾಡಿದಂತೆ ಯಾವ್ದೋ ಒಂದು ವೀಡಿಯೋ ಓಡಾಡುತ್ತಿದೆ. ಯತಿರಾಜ್ ನಿಜವಾಗಿಯೂ ಯಾವುದೋ ಅಮಲಿನಲ್ಲಿದ್ದರೋ ಇಲ್ಲ ಅಪಘಾತದಿಂದ ಆದ ಆಘಾತದಿಂದ ಆ ರೀತಿ ಆಡಿದ್ರೋ ಗೊತ್ತಿಲ್ಲ. ಆದರೆ ಇದಕ್ಕೆ ಸರಿಯಾದ ಉತ್ತರ ಮಾತ್ರ ಯಾರಿಂದಲೂ ಸಿಗುತ್ತಿಲ್ಲ.
ಯತಿರಾಜ್ ಆಸ್ಪತ್ರೆಯಿಂದ ಹೊರ ಬಂದ ಅವತಾರ ನೋಡಿದವರೆಲ್ಲಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬರೀ ಆತನ ಬಗ್ಗೆ ಮಾತನಾಡೋದಲ್ಲ, ಎಂತಹ ಅಪ್ಪನಿಗೆ ಎಂತಹ ಮಗ ಅಂತಲೂ ಮೂದಲಿಸುತ್ತಿದ್ದಾರೆ. ನಟ ಜಗ್ಗೇಶ್ ಏನೇ ಪೋಸ್ಟ್ ಮಾಡಿದ್ರು, ಕಾಮೆಂಟ್ ಬಾಕ್ಸ್ ನಲ್ಲಿ ಮೊದಲು ಮಗನಿಗೆ ಬುದ್ದಿ ಹೇಳಿ ಅನ್ನೋ ಉಪದೇಶ ಸಿಗ್ತಿದೆ. ಒಬ್ಬ ಹಿರಿಯ ನಟನಿಗೆ ಇಂತಹ ಪರಿಸ್ಥಿತಿ ಎದುರಾಗಬಾರದಿತ್ತು. ನಟ ಜಗ್ಗೇಶ್ ಅವರು ಕೂಡ ಮೊದಲು ಅಪಘಾತದ ಕುರಿತು ಎರಡು ಟ್ವೀಟ್ ಮಾಡಿ, ನಂತರ ಡಿಲೀಟ್ ಮಾಡಿದ್ದರು. ಕೊನೆಗೊಂದು ಟ್ವೀಟ್ ಮಾಡಿ ಮಗನ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ನಿಜಕ್ಕೂ ಅಲ್ಲಿ ಏನಾಯ್ತು, ಅಪಘಾತ ಹೇಗಾಯ್ತು ಅನ್ನೋದನ್ನ ಹೇಳಲಿಲ್ಲ. ಮೊದಲು ಟ್ವೀಟ್ ಮಾಡಿದ್ದು, ಯಾವುದೋ ನಾಯಿ ಅಡ್ಡ ಬಂತು ಅದನ್ನ ರಕ್ಷಿಸಲು ಹೋಗಿ ಅಪಘಾತವಾಯ್ತು ಅಂದ್ರು. ಆದರೆ ಪ್ರತ್ಯಕ್ಷದರ್ಶಿಗಳು ಹೇಳೋದು ಯಾವುದೋ ಬೈಕ್ ಯೂಟರ್ನ್ ತಗೊಳ್ಳೊಕೆ ಹೋದಾಗ ಅಡ್ಡ ಬಂದು ಯತಿರಾಜ್ ಚಲಾಯಿಸುತ್ತಿದ್ದ ಬಿಎಂಡಬ್ಯೂ ಕಾರ್ ಪಲ್ಟಿ ಹೊಡೀತು ಅಂತಾರೆ. ಒಟ್ನಲ್ಲಿ ಅಪಘಾತದ ಬಗ್ಗೆ ನಿಖರ ಮಾಹಿತಿ ಯಾರಿಗೂ ಇಲ್ಲ. ಸರಿಯಾದ ಮಾಹಿತಿ ಯತಿರಾಜ್ ಅವರಿಗೆ ಗೊತ್ತು ಆದರೆ ಅವರು ಟಿಷ್ಕಾಂವ್ ಅಂತ ಹೇಳಿ ಹೊರಟುಬಿಟ್ಟರು.
ಜಗ್ಗೇಶ್ ಅವರು ಪೂಜಿಸುವ ರಾಯರ ದಯೆಯಿಂದ ಯತಿರಾಜ್ ಸಣ್ಣ ಪುಟ್ಟ ಗಾಯಗಳಾಗಿ ಬದುಕುಳಿದಿದ್ದಾರೆ. ಅವರ ಕಾರಿನ ವೇಗಕ್ಕೆ ಬೇರೆ ಯಾವುದೇ ಹಾನಿಯೂ ಆಗಿಲ್ಲ. ಅವರು ನಿಜಕ್ಕೂ ನಾಯಿಯನ್ನೋ ಯೂಟರ್ನ್ ಮಾಡ್ತಿದ್ದ ಬೈಕ್ ಅನ್ನೋ ರಕ್ಷಿಸಲು ಹೋದಾಗ ಕಾರ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದನ್ನೇ ನಾವೆಲ್ಲರೂ ಒಪ್ಪಬೇಕಾಗಿದೆ. ಇದಕ್ಕಿಂತ ಸತ್ಯ ಮತ್ತೇನೂ ಹೊರ ಬರೋಕೆ ಸಾಧ್ಯವಿಲ್ಲ. ಕೊನೆಯದಾಗಿ ಜಗ್ಗೇಶ್ ಅವರ ಮಠ ಚಿತ್ರದ ಹಾಡು ನೆನಪಾಗುತ್ತೆ. ‘ತಪ್ಪು ಮಾಡದವರು ಯಾರೌರೆ ತಪ್ಪೇ ಮಾಡದೋರ್ ಎಲ್ಲವ್ರೇ, ಅಪ್ಪಿ ತಪ್ಪಿ ತಪ್ಪಾಗುತ್ತೆ, ತಿಳಿದು ಕೂಡ ತಪ್ಪಾಗತ್ತೆ, ತಿದ್ಕೊಳ್ಳೋಕೆ ದಾರಿ ಐತೆ.