ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದು ಕೆಲವು ವರ್ಷಗಳ ಹಿಂದಷ್ಟೇ. ಹಾಗಂತ ಕೆಜಿಎಫ್ 2 ನಟನೀಗ ಕೇವಲ ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಯಶ್ ಮೂವೀ ಕೆಜಿಎಫ್ ಬಂದ್ಮೇಲೆ ಇಡೀ ವಿಶ್ವಕ್ಕೆ ಚಿರಪರಿಚಿತ. ಯಶ್ ಮನೆ ಬಿಟ್ಟು ಎಲ್ಲೇ ಹೋದ್ರೂ ಅಭಿಮಾನಿಗಳು ಮುತ್ತಿಕೊಳ್ತಾರೆ. ಕೆಲವು ದಿನಗಳ ಹಿಂದೆ ಯಶ್ ಮುಂಬೈಗೆ ಹೋಗಿದ್ರು. ಈ ವೇಳೆ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಅಭಿಮಾನಿಗಳು ಮುಗಿಬಿದ್ರು. ಆಗ ಕೆಜಿಎಫ್ 2 ನಟನ ಬಾಡಿ ಗಾರ್ಡ್ ಅಭಿಮಾನಿಯೊಬ್ಬನನ್ನು ತಳ್ಳಿದ ಘಟನೆ ನಡೆದಿದೆ. ಆ ವೇಳೆ ಯಶ್ ಏನ್ ಮಾಡಿದ್ರು ನೋಡಿ.
ಅಣ್ಣಾವ್ರ ಕಾಲದಿಂದ್ಲೂ ಸ್ಟಾರ್ಗಳು ಅಭಿಮಾನಿಗಳನ್ನು ದೇವರಂತೆ ಕಾಣುತ್ತಾರೆ. ಅಭಿಮಾನಿಗಳು ಇಲ್ಲದೆ ಹೋದ್ರೆ, ಯಾವ ನಟನಿಗೂ ಯಶಸ್ಸು ಸಿಗೋದಿಲ್ಲ. ಅಭಿಮಾನಿಗಳ ಪ್ರೀತಿ, ಅಭಿಮಾನದ ಬಗ್ಗೆ ಪ್ರತಿಯೊಬ್ಬ ನಟನಿಗೂ ಗೊತ್ತಿದೆ. ಮುಂಬೈಗೆ ಜಾಹೀರಾತಿನ ಚಿತ್ರೀಕರಣಕ್ಕೆಂದು ತೆರಳಿದ್ದ ಯಶ್ ನೋಡಲು ಫ್ಯಾನ್ಸ್ ಮುತ್ತಿಕೊಂಡಿದ್ರು. ಅವ್ರಿಂದ ಯಶ್ರನ್ನು ಹೊರತರಲು ಬಾಡಿಗಾರ್ಡ್ ಅಭಿಮಾನಿಯೊಬ್ಬನನ್ನು ತಳ್ಳಿದ್ರು. ಇದನ್ನು ಗಮನಿಸಿದ ಯಶ್ ಅಭಿಮಾನಿಗೆ ಸಮಾಧಾನ ಹೇಳಿ ಬಂದ್ರು. ಜೊತೆಗೆ ಅಭಿಮಾನಿಗಳನ್ನು ಹಾಗೆ ತಳ್ಳಬೇಡ ಅಂತ ಬಾಡಿಗಾರ್ಡ್ಗೆ ಸನ್ನೆ ಮಾಡಿ ತಿಳಿಸಿದ್ರು. ಈ ವೀಡಿಯೋ ಈಗ ವೈರಲ್ ಆಗಿದೆ.
ಯಶ್ ದಿಢೀರ್ ಮುಂಬೈ ಪ್ರವಾಸ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಕೆಲವು ಮೂಲಗಳ ಪ್ರಕಾರ, ಯಶ್ ಜಾಹೀರಾತಿನ ಚಿತ್ರೀಕರಣವೊಂದಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದ್ಕಡೆ, ಮುಂದಿನ ಸಿನಿಮಾದ ನಿರ್ಮಾಪಕರು ಮುಂಬೈ ಮೂಲದವರಾಗಿದ್ದು, ಅವ್ರನ್ನು ಭೇಟಿ ಮಾಡಲು ತೆರಳಿದ್ದಾರೆ ಅನ್ನುವ ಸುದ್ದಿಯೂ ಹರಿದಾಡುತ್ತಿದೆ.
ಯಶ್ ಅಭಿಮಾನಿಗಳೇ ಹರಿಬಿಟ್ಟಿರೋ ವೀಡಿಯೋ ನೋಡ್ತಿದ್ರೆ, ಯಶ್ ಜಾಹೀರಾತಿನ ಚಿತ್ರೀಕರಣದಲ್ಲಿ ಭಾಗಿಯಾಗಿರಬಹುದು ಅಂತ ಅಂದಾಜು ಮಾಡಬಹುದು. ಆದ್ರೆ, ಯಶ್ ಈ ಜಾಹೀರಾತಿನ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಯಶ್ ಅಭಿನಯದ ಕೆಜಿಎಫ್ 2 ಏಪ್ರಿಲ್ 14ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.