ತಮ್ಮ ಬಗ್ಗೆ ಇಲ್ಲಸಲ್ಲದ ಸುದ್ದಿಯನ್ನು ಪ್ರಕಟಿಸಿದ್ದಾರೆ ಅಂತ ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ರಕ್ಷಿತ್ ಶೆಟ್ಟಿ ಗರಂ ಆಗಿದ್ದಾರೆ. ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಕೊಡ್ತೀನಿ ಕಾಯ್ತಾ ಇರಿ ಅಂತ ಸವಾಲು ಹಾಕಿದ್ದಾರೆ. ಇತ್ತೀಚೆಗೆ ಯಾಕಿಂಗೆ ಇವರೆಲ್ಲಾ ? ಅನ್ನೋ ಟೈಟಲ್ ನಲ್ಲಿ ಕಾರ್ಯಕ್ರಮ ಪ್ರಸಾರ ಆಗಿತ್ತು. ನಟ ರಕ್ಷಿತ್ ಶೆಟ್ಟಿ ಮತ್ತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕುರಿತು ಸುದ್ದಿ ಪ್ರಸಾರ ಮಾಡಲಾಗಿತ್ತು. ಇಷ್ಟೇ ಆಗಿದ್ದರೆ ರಕ್ಷಿತ್ ಶೆಟ್ಟಿ ಸುಮ್ಮನಿರ್ತಿದ್ರೋ ಏನೋ? ಆದ್ರೆ ರಕ್ಷಿತ್ ನಿದ್ದೆ ಕೆಡಿಸಿದ್ದ ರಶ್ಮಿಕಾ ಮಂದಣ್ಣಂಗೆ ಸಂಬಂಧಿಸಿದ್ದ ವಿಷಯ. ಈ ಎರಡು ವಿಚಾರವಾಗಿ ಚಾನಲ್ ವಿರುದ್ಧ ರಕ್ಷಿತ್ ಶೆಟ್ಟಿ ಕೆಂಡಾಮಂಡಲವಾಗಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಸೋಲಿನಿಂದ ರಕ್ಷಿತ್ ಶೆಟ್ಟಿ ಜೊತೆ ನಿರ್ಮಾಪಕ ಪುಷ್ಕರ್ ಸ್ನೇಹ ಕಡಿದುಕೊಂಡಿದ್ದಾರೆ. ಆ ಚಿತ್ರದಿಂದ ರಕ್ಷಿತ್ ಶೆಟ್ಟಿ, ಪುಷ್ಕರ್ಗೆ ₹20 ಕೋಟಿ ನಷ್ಟ ಮಾಡಿದ್ದಾರೆ. ಹೀಗಾಗಿ ಪುಷ್ಕರ್ , ರಕ್ಷಿತ್ ಸಂಘದಿಂದ ದೂರ ಉಳಿದಿದ್ದಾರೆ ಅನ್ನೋ ಅರ್ಥದಲ್ಲಿ ವರದಿ ಮಾಡಿದ್ದರು. ಅಷ್ಟೇ ಅಲ್ಲ, ರಶ್ಮಿಕಾ ಜೊತೆಗಿನ ನಿಶ್ಚಿತಾರ್ಥ ಮುರಿದು ಬೀಳಲು ರಕ್ಷಿತ್ ಶೆಟ್ಟಿ ಕಾರಣ ಅನ್ನೋ ಅರ್ಥದಲ್ಲೂ ಸುದ್ದಿ ಪ್ರಸಾರವಾಗಿತ್ತು.
ರಕ್ಷಿತ್ ಹಾಗೂ ಪುಷ್ಕರ್ ನಡುವೆ ಸಂಬಂಧ ಹಳಸಿದೆ ಅಂದಿದ್ರೆ ಸುಮ್ಮನಾಗಿಬಿಡ್ತಿದ್ರೋ ಏನೋ? ಆದ್ರೆ, ರಶ್ಮಿಕಾ ಮಂದಣ್ಣ ಎಳೆದು ತಂದಿದ್ದು ಸಿಂಪಲ್ ಸ್ಟಾರ್ಗೆ ನೋವುಂಟು ಮಾಡಿದೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ ಇಂತಹದ್ದೇ ಸಾಕಷ್ಟು ಸುದ್ದಿಗಳನ್ನು ಪ್ರಸಾರ ಮಾಡಿದ್ದರಂತೆ. ಇದೇ ಕಾರಣಕ್ಕೆ ರಕ್ಷಿತ್ ಶೆಟ್ಟಿ ಫುಲ್ ಗರಂ ಆಗಿದ್ದಾರೆ. ನನ್ನಿಂದ ಎಲ್ಲರೂ ಪಡೆದುಕೊಂಡು ಹೋಗಿದ್ದಾರೆ. ಯಾರೂ ಏನನ್ನು ಕಳೆದುಕೊಂಡಿಲ್ಲ, ನಿಮ್ಮ TRPಗಾಗಿ ಏನೇನೋ ಸುದ್ದಿ ಮಾಡಬೇಡಿ ಅಂತ ಸಿಂಪಲ್ ಸ್ಟಾರ್ ಟ್ವೀಟ್ ಮಾಡಿದ್ದಾರೆ.