-ನಿಮ್ಮ ನಿರೀಕ್ಷೆಯಂತೆ ನಾನು ಕೆಲಸ ಮಾಡಿಲ್ಲ – ಕೆಲಸ ಮಾಡೋದಕ್ಕೆ ಟ್ರೈ ಮಾಡ್ತೇನೆ.!
-ಹಣಕಾಸು ಸಚಿವೆ ಕೊಟ್ಟಿದ್ದು ಹತಾಶೆಯ ನುಡಿಯೋ – ವ್ಯಂಗವೋ ?
-ಕರ್ನಾಟಕದ ಪರವಾಗಿ ಗಟ್ಟಿಯಾಗಿ ನಿಂತಿದ್ದೇನೆ ಅಂತ ನಿರ್ಮಲಾ ಸೀತಾರಾಮನ್ ಹೇಳಲಿಲ್ಲ ಯಾಕೆ?
ಬಹಳ ಅಪರೂಪಕ್ಕೆ ರಾಜ್ಯಕ್ಕೆ ಬಂದಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪರವಾಗಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಅಂತ ಹೇಳಿಕೆ ಕೊಟ್ಟಿದ್ದಾರೆ. ನಮ್ಮ ರಾಜ್ಯದ ಸಂಸದೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಯಾಕೆ ರಾಜ್ಯದ ಪರವಾಗಿ ಅಷ್ಟು ಗಟ್ಟಿಯಾಗಿ ನಿಲ್ಲಲ್ಲ ಅನ್ನೋ ಪ್ರತಿಪಕ್ಷದವರ ಆರೋಪಕ್ಕೆ ಉತ್ತರ ಕೊಡುವಾಗ ಸ್ವಲ್ಪ ಸಿಟ್ಟಾಗಿದ್ದರು. ಯಾಕೆ ಮೇಡಂ ನೀವು ಕರ್ನಾಟಕದ ಪರವಾಗಿ ಅಷ್ಟಾಗಿ ನಿಲ್ಲೋದಿಲ್ಲ ಅಂತ ಮಾಧ್ಯಮದವರು ಕೇಳಿದ್ದಕ್ಕೆ ಸಿಟ್ಟಾದರು. ಜೊತೆಗೆ ಮರುಪ್ರಶ್ನೆ ಹಾಕಿ ಮಾಧ್ಯಮದವರನ್ನೇ ಸುಮ್ಮನಾಗಿಸೋ ಯತ್ನ ಮಾಡಿದ್ರು. ಆದ್ರೂ ಪಟ್ಟು ಬಿಡದ ಮಾಧ್ಯಮದವರ ಪ್ರಶ್ನೆಗಳಿಗೆ ಅನಿವಾರ್ಯವಾಗಿ ಉತ್ತರ ಕೊಟ್ಟ ನಿರ್ಮಲಾ ಸೀತಾರಾಮನ್, ‘‘ನಾನು ನಿರೀಕ್ಷೆಯಂತೆ ಕೆಲಸ ಮಾಡಿಲ್ಲ – ಕೆಲಸ ಮಾಡೋದಕ್ಕೆ ಪ್ರಯತ್ನ ಮಾಡ್ತೇನೆ’’ ಅಂತ ಹೇಳಿ ಹೊರಟರು..
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯಾಕೋ ಇವತ್ತು ಕೊಟ್ಟ ಉತ್ತರದ ಹಿಂದೆ ಹತಾಶೆಯ – ಸಿಟ್ಟಿನ – ಬೇಸರದ ಸಂಗತಿ ಇದೆಯಾ ಅಂತ ಅನಿಸ್ತಿದೆ. ಕರ್ನಾಟಕದ ಸಂಸದೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಪವರ್ ಪುಲ್ ಹಣಕಾಸು ಸಚಿವೆ. ಸಹಜವಾಗಿಯೇ ಒಂದಷ್ಟು ನಿರೀಕ್ಷೆಗಳು ರಾಜ್ಯದಿಂದ ಇರೋದು ತಪ್ಪಲ್ಲ. ಆದ್ರೆ ಪ್ರಾಮಾಣಿಕವಾಗಿ ರಾಜ್ಯದ ಪರವಾಗಿ ನಿಲ್ಲಬೇಕಾಗಿದ್ದ ನಿರ್ಮಲಾ ಸೀತಾರಾಮನ್ ರಾಜ್ಯದ ಪರವಾಗಿ ಧ್ವನಿ ಎತ್ತಿದ ಉದಾಹರಣೆ ಕಡಿಮೆ. ಇದನ್ನು ಪ್ರತಿಪಕ್ಷಗಳು ಆಕ್ಷೇಪಿಸುವುದು ಸಹಜ.. ಇದೇ ಪ್ರಶ್ನೆಯನ್ನು ಎದುರಿಸಿದ ನಿರ್ಮಲಾ ಸೀತಾರಾಮನ್ ಅವರು ಕೊಟ್ಟ ಉತ್ತರ ಮಾತ್ರ ರಾಜ್ಯದ ಜನರಿಗೆ ತಕ್ಕುದಾದುದಲ್ಲ.
‘‘ನನ್ನನ್ನು ಕ್ಷಮಿಸಿ…. ಹೌದು ನಾನು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ’’ ಅಂತ ಹೇಳುವ ಮೂಲಕ ತಾವು ವಹಿಸಿರುವ ಖಾತೆಯಲ್ಲಿ ಪ್ರಜ್ಞಾಪೂರ್ವಕವಾದ ಕೆಲಸ ಮಾಡಿಲ್ಲ ಅಂತ ಹೇಳಿ ಬಿಟ್ಟರಾ…? ಅಥವಾ ತಾವು ಮಾಡಬೇಕಾದ ಕೆಲಸ ಮಾಡಲು ತಾವು ಅಸಮರ್ಥರಾಗಿ ಬಿಟ್ಟಿದ್ದೇನೆ ಅಂತ ಬೇಸರ ಹೊರ ಹಾಕಿದ್ರಾ..? ಅಥವಾ ಕೋಪದಿಂದ ಹೀಗೆ ಹೇಳಿ ಬಿಟ್ರಾ…? ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿ ಬಿಟ್ಟಿದೆ ಮೇಡಂ ನಿರ್ಮಲಾ ಸೀತಾರಾಮನ್ ಉತ್ತರ. ಒಟ್ಟಿನಲ್ಲಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ನಿರ್ಮಲಾ ಮೇಡಂ ಅವರಿಂದ ಇನ್ನುಳಿದ ಟೈಮ್ ನಲ್ಲಿ ಕರ್ನಾಟಕದ ಪರವಾಗಿ ಗಟ್ಟಿಧ್ವನಿ ನಿರೀಕ್ಷೆಮಾಡಬಹುದಾ..?