ಹಾವು ಮತ್ತು ಮುಂಗುಸಿ ಸೆಣಸಾಟದಲ್ಲಿ ಹಾವು ತನ್ನ ಜೀವ ಕಳೆದುಕೊಳ್ಳುವುದನ್ನು ಜನರು ನೋಡಿದ್ದಾರೆ. ಹಾವಿನ ವಿಷ ಬಹಳ ಅಪಾಯಕಾರಿ. ಒಂದು ಆನೆಯನ್ನು ಸಾಯಿಸಲು ಬೇಕಾದ ವಿಷ ಒಂದು ಹಾವಿನಲ್ಲಿ ಇರುತ್ತದೆ. ಅಪರೂಪಕೊಮ್ಮೆ ಮುಂಗುಸಿ ಕೂಡ ಹಾವಿನ ಜೊತೆ ಸೆಣಸಾಡಿ ಸಾವನ್ನಪ್ಪುತ್ತದೆ. ಆದರೂ ಹಾವು, ಮುಂಗುಸಿ ಕಾಳಗದಲ್ಲಿ ಗೆಲ್ಲೋದು ಮುಂಗುಸಿಯೇ. ಒಂದು ಆನೆಯನ್ನ ಸಾಯಿಸುವಷ್ಟು ವಿಷ ಇದ್ದರೂ ಮುಂಗುಸಿ ಮುಂದೆ ಹಾವು ಏಕೆ ಸೋಲುತ್ತದೆ ಅಂತ ಅಚ್ಚರಿ ಮೂಡುವುದು ಸಹಜ. ಅದಕ್ಕೆ ಬಲವಾದ ಕಾರಣವೂ ಇದೆ.
ಹಾವು ಆಹಾರಕ್ಕಾಗಿ ಮುಂಗುಸಿ ಮೇಲೆ ಎರಗುತ್ತದೆ. ಆದರೆ, ಮುಂಗುಸಿಗಳು ಹಾವಿಗಿಂತಲೂ ಚುರುಕು. ಇತ್ತ ಅತ್ತ ವೇಗವಾಗಿ ಸರಿದಾಡಿ ಹಾವಿನ ಹೊಡೆತದಿಂದ ತಪ್ಪಿಸಿಕೊಳ್ಳುತ್ತದೆ. ಹಾವಿನ ವಿಷದ ಹೆಡೆಯನ್ನು ಕಚ್ಚಿ ಪದೇ ಪದೇ ನೆಲಕ್ಕೆ ಬಡಿಯುತ್ತ ಸೆಣಸಾಡುತ್ತದೆ. ಸುಸ್ತಾದ ಹಾವಿನ ಮೇಲೆರಗುವ ಮುಂಗುಸಿ, ಹಾವಿನ ತಲೆಯನ್ನು ತುಂಡರಿಸಿಬಿಡುತ್ತದೆ. ಸೆಣಸಾಟದಲ್ಲಿ ಮುಂಗುಸಿ ಸಾಯದಿರಲು ಕಾರಣ ಅವುಗಳಲ್ಲಿ ಇರುವ ರಾಸಾಯನಿಕ ಗ್ರಂಥಿಗಳು. ಇದರ ಸಹಾಯದಿಂದ ಸ್ವಲ್ಪ ಮಟ್ಟಿಗೆ ಹಾವಿನ ವಿಷವನ್ನ ಮುಂಗುಸಿಗಳು ತಡೆದುಕೊಳ್ಳುತ್ತದೆ. ಜೊತೆಗೆ ದಪ್ಪನೆಯ ಚರ್ಮ ಹೊಂದಿರುವುದರಿಂದ ಸಾವಿನ ಕಡಿತ ಬಹಳಷ್ಟು ಸಲ ಅವುಗಳಿಗೆ ತಾಗುವುದೇ ಇಲ್ಲ.
ವಿಷ ದೇಹದಲ್ಲಿರುವ ರಕ್ತಪ್ರವಾಹವನ್ನು ಪ್ರವೇಶಿಸಬೇಕು. ಆಗ ಮಾತ್ರ ಅದು ಪ್ರಾಣಕ್ಕೆ ಸಂಚಕಾರ. ಮನುಷ್ಯನ ಚರ್ಮ ಬಹಳ ಮೃದು. ಹಾಗಾಗಿ ಹಾವು ಕಚ್ಚಿದ ತಕ್ಷಣ ವಿಷ ರಕ್ತಕ್ಕೆ ಸೇರಿ, ಬೇಗ ಸಾವು ಸಂಭವಿಸಬಹುದು. ಆದರೆ ಮುಂಗುಸಿ ಸೇರಿದಂತೆ ಕೆಲ ಪ್ರಾಣಿಗಳ ಚರ್ಮ ಬಹಳ ದಪ್ಪ ಇರುತ್ತದೆ. ಹಾಗಾಗಿ ವಿಷ ಅಷ್ಟು ಸುಲಭವಾಗಿ ರಕ್ತಕ್ಕೆ ಸೇರುವುದಿಲ್ಲ. ಇನ್ನು ಹಾವು -ಮುಂಗುಸಿ ನಡುವೆ ಅಂಥಾ ದ್ವೇಷವೇನೂ ಇಲ್ಲ. ಆಹಾರಕ್ಕಾಗಿ ಮುಂಗುಸಿಗಳು ಹಾವಿನ ಮೇಲೆ ಎರಗುತ್ತದೆ. ಹಾವು ಕೂಡ ಮುಂಗುಸಿಯನ್ನ ಆಹಾರ ಮಾಡಿಕೊಳ್ಳಬಹದು ಅಂತ ತಿರುಗಿ ಬೀಳುತ್ತದೆ. ಹಾಗಂತ ಪೂರ್ತಿ ಹಾವನ್ನು ಮುಂಗುಸಿ ತಿನ್ನುವುದಿಲ್ಲ. ಅಲ್ಪ ಸ್ವಲ್ಪ ಮಾಂಸ ತಿಂದು ಉಳಿದಿದ್ದನ್ನ ಹಾಗೆ ಬಿಟ್ಟುಬಿಡುತ್ತದೆ.