ಮೊನ್ ಮೊನ್ನೆ ಫೆಬ್ರವರಿ ತಿಂಗಳು ಮುಗೀತು. ಎರಡು ದಿನ ಮೊದ್ಲೆ ಬಹುತೇಕರು ಸಂಬಳ ಎಣಿಸಿಕೊಂಡಿದ್ದಾರೆ. ಕೆಲವರು ಈಗಾಗಲೇ ಅರ್ಧ ಸಂಬಳ ಖರ್ಚು ಮಾಡಿಬಿಟ್ಟಿದ್ದಾರೆ. ಆದ್ರೆ ಎಲ್ಲರೂ ಒಂದು ವಿಷಯ ಮರತೇಬಿಟ್ಟಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಇರೋದೇ 28 ದಿನ ಇದ್ರು ಪೂರ್ತಿ ಸಂಬಳ ಕೊಟ್ಟಿದ್ದಾರೆ ಅನ್ನೋದು. ಅರೇ ನಿಜ ಅಲ್ವಾ. ಎರಡು ದಿನ ಕಡಿಮೆ ಕೆಲಸ ಮಾಡಿ ಪೂರ್ತಿ ಸಂಬಳ ಎಣಿಸಿಕೊಂಡಿದ್ದೀವಿ ಅಂತ ಖುಷಿ ಪಡಬೇಡಿ. ಇದರಲ್ಲಿ ಖುಷಿ ಪಡೋಕೆ ಏನು ಇಲ್ಲ. ತಿಂಗಳಿಗೆ 30 ದಿನ ಅಂತ ಲೆಕ್ಕ ಹಾಕಿದ್ರೆ, ಪ್ರತಿ ವರ್ಷ ನಾವೇ 5 ದಿನ ಹೆಚ್ಚು ಕೆಲಸ ಮಾಡುತ್ತಿದ್ದೇವೆ.
ಸಾಮಾನ್ಯವಾಗಿ ನಾವು ತಿಂಗಳು ಅಂದ್ರೆ, 30 ದಿನ ಅಂದುಕೊಳ್ಳುತ್ತೇವೆ. ಕೆಲಸಕ್ಕೆ ಸೇರಿದಾಗ ತಿಂಗಳಿಗೆ ಇಷ್ಟು ಅಂತ ಸಂಬಳ ಫಿಕ್ಸ್ ಆಗುತ್ತೆ. 30 ದಿನಕ್ಕೆ ಇಷ್ಟು ಸಂಬಳ, ಅಂದ್ರೆ ದಿನವೊಂದಕ್ಕೆ ಇಷ್ಟು ಅಂತ ನಾವು ಲೆಕ್ಕ ಹಾಕಿಕೊಳ್ಳುತ್ತೇವೆ. ಉದಾಹರಣೆಗೆ ಹೇಳುವುದಾದರೆ ಸಂಬಳ 30 ಸಾವಿರ ಅಂದ್ರೆ ದಿನಕ್ಕೆ 1 ಸಾವಿರ. ಆದ್ರೆ ತಿಂಗಳಲ್ಲಿ 4 ಭಾನುವಾರ ಬರುತ್ತೆ. ಹಬ್ಬ ಹರಿದಿನಗಳಿಗೆ ಅಂತ ರಜೆ ಸಿಗುತ್ತೆ. ಅದನ್ನೆಲ್ಲಾ ಕಳೀತಾ ಹೋದ್ರೆ, ಸಂಬಳ 22-23 ಸಾವಿರ ಕೊಡಬೇಕಾಗಬಹುದು. ಆದರೆ 30 ಸಾವಿರ ಕೊಡುತ್ತಾರೆ. ಅದರ ಅರ್ಥ ಸಂಬಳಕ್ಕೂ ನಾವು ಕೆಲಸ ಮಾಡುವ ದಿನಗಳಿಗೂ ಸಂಬಂಧವಿಲ್ಲ. ಆದರೆ ನಾಲ್ಕು ಭಾನುವಾರ, ಹಬ್ಬದ ರಜೆ ಬಿಟ್ಟು ಬೇರೆ ದಿನಗಳಲ್ಲಿ ರಜೆ ಹಾಕಿದ್ರೆ, ಸಂಬಳಕ್ಕೆ ಕತ್ತರಿ ಬೀಳುತ್ತೆ. ಪ್ರತಿ ತಿಂಗಳು ಹೀಗೆ ರಜೆಗಳನ್ನೆಲ್ಲಾ ಕಳೆದು ಉದ್ಯೋಗಿಗಳಿಗೆ ಸರಿಯಾಗಿ ಸಂಬಳ ಕೊಡೋದು ಹೆಚ್ಆರ್ಗಳಿಗೆ ತಲೆನೋವಿನ ಕೆಲಸವೇ ಸರಿ.
ಜಗತ್ತಿನಲ್ಲಿ ಅತಿ ಹೆಚ್ಚು ಉಪಯೋಗಿಸುವ ಕ್ಯಾಲೆಂಡರ್ಗಳಲ್ಲಿ ಗ್ರೆಗೋರಿಯನ್ ಮೊದಲ ಸ್ಥಾನದಲ್ಲಿದೆ. ಗ್ರೆಗೋರಿಯನ್ ಕ್ಯಾಲೆಂಡರ್ಗೂ ಮುನ್ನ ಜೂಲಿಯನ್ ಕ್ಯಾಲೆಂಡರ್ ಬಳಸುತ್ತಿದ್ದರು. ಇದೇ ಕ್ಯಾಲೆಂಡರ್ ಭಾರತದಲ್ಲೂ ಚಾಲ್ತಿಯಲ್ಲಿದೆ. ಮೊದಲೇ ಹೇಳಿದಂತೆ ನಮಗೆ ತಿಂಗಳಿಗೆ ಇಷ್ಟು ಅಂತ ಸಂಬಳ ನಿಗದಿಯಾಗುತ್ತೆ. 30 ದಿನ 31 ದಿನಗಳು ಇಲ್ಲಿ ಲೆಕ್ಕಕ್ಕೆ ಬರೋದಿಲ್ಲ. ಫೆಬ್ರವರಿಯಲ್ಲಿ 28 ದಿನ ಕೆಲಸ ಮಾಡಿದ್ರು, ಪೂರ್ತಿ ಸಂಬಳ ಸಿಗುತ್ತೆ. ಇನ್ನೊಂದು ವಿಚಾರ ಏನಪ್ಪಾ ಅಂದ್ರೆ, ವರ್ಷದ 6 ರಿಂದ 7 ತಿಂಗಳಲ್ಲಿ 31 ದಿನಗಳಿರುತ್ತವೆ. ಅದರ ಅರ್ಥ 7 ದಿನ ಹೆಚ್ಚು ಕೆಲಸ ಮಾಡಿದಂತಾಯಿತು. ಇದೆಲ್ಲದರ ನಡುವೆ 4 ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ 29 ದಿನ ಬಂದು ಒಂದು ದಿನ ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ ಅನ್ನೋದೇ ಬೇಸರದ ಸಂಗತಿ.