ಅರುಂಧತಿ, ಬಾಹುಬಲಿ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಸ್ಟಾರ್ ಹೀರೋಯಿನ್ ಪಟ್ಟಕ್ಕೇರಿದ್ದಾರೆ. ಸ್ವೀಟಿ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಅನ್ನೋ ಕೊರಗು ಅಭಿಮಾನಿಗಳನ್ನ ಕಾಡ್ತಿದೆ. ಆದರೆ ತೆಲುಗಿನ ‘ಸೂಪರ್’ ಚಿತ್ರದಲ್ಲಿ ನಟಿಸುವ ಮೊದಲು ಅನುಷ್ಕಾ ಶೆಟ್ಟಿ ಕನ್ನಡ ಚಿತ್ರದಲ್ಲಿ ನಟಿಸಬೇಕಿತ್ತು. ಕೋಡ್ಲು ರಾಮಕೃಷ್ಣ ನಿರ್ದೇಶನದ ‘ಮಿಸ್ ಕ್ಯಾಲಿಫೋರ್ನಿಯಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸೋ ಅವಕಾಶವನ್ನು ಅನುಷ್ಕಾ ಶೆಟ್ಟಿ ಅಂದು ಮಿಸ್ ಮಾಡಿಕೊಂಡಿದ್ದರು. ಈ ವಿಚಾರವನ್ನು ಇದೀಗ ನಿರ್ದೇಶಕ ಕೋಡ್ಲು ರಾಮಕೃಷ್ಣ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಕೋಡ್ಲು ರಾಮಕೃಷ್ಣ. ತೀರ್ಥಹಳ್ಳಿ ಮೂಲದ ಕೋಡ್ಲು ರಾಮಕೃಷ್ಣ 20 ವರ್ಷಗಳ ಹಿಂದೆ ಅನುಷ್ಕಾ ಶೆಟ್ಟಿ ಫೋಟೋ ಶೂಟ್ ಮಾಡಿಸಿದ್ದರಂತೆ. ಮಿಸ್ ಕ್ಯಾಲಿಫೋರ್ನಿಯಾ ಚಿತ್ರದಲ್ಲಿ ನಟಿಸಲು ಸ್ವೀಟಿ ಆಯ್ಕೆ ಆಗಿದ್ದರು. ಆದರೆ ಆ ಚಿತ್ರದಲ್ಲಿ ನಟಿಸಲು ಅಮೇರಿಕಾಗೆ ಹೋಗಬೇಕಾದ ಸಮಯದಲ್ಲೇ ಸ್ವೀಟಿಗೆ ಪಿಯುಸಿ ಪರೀಕ್ಷೆ ಇದ್ದಿದ್ದರಿಂದ ಸ್ವೀಟಿ ನಟಿಸೋಕೆ ಹಿಂದೇಟು ಹಾಕಿದ್ದರು. ಹಾಗಾಗಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಅವಕಾಶವನ್ನು ಕೋಡ್ಲು ರಾಮಕೃಷ್ಣ ಕೈ ಚೆಲ್ಲಿದ್ದರು.
‘ಮಿಸ್ ಕ್ಯಾಲಿಪೋರ್ನಿಯಾ’ ಚಿತ್ರಕ್ಕೂ ಮೊದಲು ಕೋಡ್ಲು ರಾಮಕೃಷ್ಣ ‘ಹಲೋ’ ಅನ್ನೋ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾ ಶೂಟಿಂಗ್ ಸೆಟ್ಗೆ ಸ್ವೀಟಿ ಪ್ರತಿದಿನ ಹೋಗುತ್ತಿದ್ದರಂತೆ. ಅದನ್ನು ದಿನ ಗಮನಿಸುತ್ತಿದ್ದ ಕೋಡ್ಲು ರಾಮಕೃಷ್ಣ ಒಮ್ಮೆ ಆಕೆಯನ್ನು ಕರೆದು, ನೋಡೋಕೆ ಮುದ್ದಾಗಿದ್ದೀಯಾ. ಚಿತ್ರದಲ್ಲಿ ನಟಿಸೋ ಆಸೆ ಇದ್ಯಾ ಅಂತ ಕೇಳಿದ್ದಾರೆ. ಇಲ್ಲ ಅಂತ ತಲೆ ಆಡಿಸಿ ಹೋಗಿದ್ದ ಸ್ವೀಟಿ, ಮಾರನೇ ದಿನ ಮತ್ತೆ ಬಂದು ನಿರ್ದೇಶಕರ ಬಳಿ ನಿಂತು, ಸರ್ ನಮ್ಮ ತಂದೆ ನಿಮ್ಮ ಜೊತೆ ಮಾತನಾಡಬೇಕಂತೆ ಮನೆಗೆ ಬನ್ನಿ ಅಂತ ಹೇಳಿದ್ದಾರೆ. ಜೊತೆಗೆ ಮೀನು ತಿನ್ನುತ್ತೀರಾ ಅಂತ ಕೇಳಿದ್ದಾರೆ. ಅದಕ್ಕೆ ನಿರ್ದೇಶಕರು ಸರಿ ಅಂತ ಹೇಳಿದ್ದಾರೆ. ಮಾರನೇ ದಿನವೇ ಕೋಡ್ಲು ರಾಮಕೃಷ್ಣ, ಸ್ವೀಟಿ ಶೆಟ್ಟಿ ಮನೆಗೆ ಹೋಗಿದ್ದಾರೆ. ಅಷ್ಟರಲ್ಲಾಗಲೇ ಅವರ ಮನೆಯಲ್ಲಿ ಭರ್ಜರಿ ಊಟಕ್ಕೆ ವ್ಯವಸ್ಥೆ ಆಗಿತ್ತು. ಊಟ ಮಾಡುತ್ತಾ ನಿರ್ದೇಶಕರು ನಿಮ್ಮ ಮಗಳು ನೋಡಲು ಮುದ್ದಾಗಿದ್ದಾಳೆ, ನೀವು ಒಪ್ಪಿದ್ರೆ, ಸಿನಿಮಾ ಮಾಡೋಣ ಅಂದಿದ್ದಾರೆ. ಅದಕ್ಕೆ ಸ್ವೀಟಿ ಫ್ಯಾಮಿಲಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ಸಿನಿಮಾಗೂ ಮೊದಲು ಒಂದು ಫೋಟೋಶೂಟ್ ಮಾಡಿಸೋಣ ಅಂತ ಹೇಳಿ ಕೋಡ್ಲು ರಾಮಕೃಷ್ಣ ಫೋಟೋಗ್ರಫರ್ನ ಕರೆಸಿ, ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಆದರೆ ಅದಾಗಲೇ ‘ಹಲೋ’ ಚಿತ್ರಕ್ಕೆ ಪಾತ್ರವರ್ಗ ಆಯ್ಕೆ ಆಗಿತ್ತಂತೆ. ಹಾಗಾಗಿ ಮುಂದಿನ ಚಿತ್ರಕ್ಕೆ ಸ್ವೀಟಿ ಶೆಟ್ಟಿನೇ ನಾಯಕಿ ಅಂತ ನಿರ್ದೇಶಕರು ಫಿಕ್ಸ್ ಆಗಿದ್ದಾರೆ. 2006ರಲ್ಲಿ ಮಿಸ್ ಕ್ಯಾಲಿಫೋರ್ನಿಯಾ ಚಿತ್ರಕ್ಕೆ ಸ್ವೀಟಿ ಆಯ್ಕೆ ಆಗಿದ್ದರು. ಆದರೆ ಶೂಟಿಂಗ್ ಹೋಗುವ ವೇಳೆ ಪರೀಕ್ಷೆ ಬಂದ ಕಾರಣ ಸಿನಿಮಾದಲ್ಲಿ ನಟಿಸೋಕೆ ಸ್ವೀಟಿ ಒಪ್ಪಿರಲಿಲ್ಲ. ಹಾಗಾಗಿ ಆ ಚಿತ್ರದಲ್ಲಿ ಸ್ವೀಟಿ ನಟಿಸೋದು ಸಾಧ್ಯವಾಗಿರಲಿಲ್ಲ. ಆ ನಂತ್ರ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದು ‘ಸೂಪರ್’ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಂತ ಹೆಸರು ಬದಲಿಸಿಕೊಂಡು ಸ್ವೀಟಿ ಶೆಟ್ಟಿ ನಟಿಸಿ ಗೆದ್ದರು.