ವಿಜಯ್ ಸೇತುಪತಿ ತಮಿಳಿನ ಸ್ಟಾರ್ ನಟ. ಇವರ ಸಿನಿಮಾಗಳಿಗಾಗಿ ಜನರು ಮುಗಿಬಿದ್ದು ಕಾಯ್ತಾರೆ. ನಟನೆಯಿಂದ್ಲೇ ಜನರ ಮನಗೆದ್ದ ನಟ ಕೊನೆಗೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟೇ ಬಿಟ್ಟಿದ್ದಾರೆ. ಮೊದಲು ಕನ್ನಡ ಸಿನಿಮಾದಿಂದ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ ಆ ಸಿನಿಮಾ ರಿಲೀಸ್ ಆಗಿರಲಿಲ್ಲ. ಈಗ ಮೈಕಲ್ ಜೊತೆ ಮಾಸ್ ಆ್ಯಕ್ಷನ್ ಅವತಾರದಲ್ಲಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಡಲಿದ್ದಾರೆ.
ಸಂದೀಪ್ ಕಿಶನ್ ಮತ್ತು ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕಾಂಬಿನೇಷನ್ನಲ್ಲಿ ಮೈಕಲ್ ಅನ್ನೋ ಸಿನಿಮಾ ಶುರುವಾಗಿದೆ. ಭರವಸೆಯ ನಾಯಕ ನಟ ಸಂದೀಪ್ ಕಿಶನ್ ಅವರನ್ನು ನಾಯಕನನ್ನಾಗಿ ಆಯ್ಕೆ ಆಗಿದ್ದಾರೆ. ಟೈಟಲ್ ರೋಲ್ ಸಂದೀಪ್ ಕಿಶನ್ಗೆ ಸಿಕ್ಕಿದ್ದು, ತಮಿಳಿನಲ್ಲಿ ಹವಾ ಸೃಷ್ಟಿಸಿರುವ ವಿಜಯ್ ಸೇತುಪತಿ ಸ್ಪೆಷಲ್ ಮಾಸ್ ಆ್ಯಕ್ಷನ್ ಅವತಾರದಲ್ಲಿ ಅಬ್ಬರಿಸಲಿದ್ದಾರೆ.
ಮೈಕಲ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ಮೂಡಿಬರಲಿದೆ. ಈ ಮೂಲಕ ವಿಜಯ್ ಸೇತುಪತಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ. ನಿರ್ಮಾಪಕ ಸುನೀಲ್ ನಾರಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಕಲ್ ಸಿನಿಮಾ ಘೋಷಣೆ ಆಗಿದೆ. ಶೀರ್ಷಿಕೆ ಪೋಸ್ಟರ್ ಸಹ ಬಿಡುಗಡೆ ಆಗಿದೆ. ರಂಜಿತ್ ಜೆಯಕೊಡಿ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.
ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ಮೈಕಲ್ ಸಿನಿಮಾ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಈ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದ್ದು, ಅಲ್ಲಿಯವರೆಗೂ ಉಳಿದ ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ.