ಕೊರೊನಾ ಆರ್ಭಟದಿಂದ ಏನೆಲ್ಲಾ ಬದಲಾವಣೆ ಆಗುತ್ತಿದೆ ನೋಡಿ. ಲಾಕ್ ಡೌನ್ ನಿಂದ ಥಿಯೇಟರ್ ಬಂದ್ ಆಗಿ ಎಲ್ಲಾ ಓಟಿಟಿ ಕಡೆ ಮುಖ ಮಾಡ್ತಿದ್ದಾರೆ. ಇವತ್ತಲ್ಲ ನಾಳೆ ಥಿಯೇಟರ್ ಓಪನ್ ಆಗುತ್ತೆ ಅಂತ ಕೆಲವರು ಆಸೆಗಣ್ಣಿನಿಂದ ಕಾಯ್ತಿದ್ದಾರೆ. ಕೊರೊನಾ 3ನೇ ಅಲೆ ಆತಂಕ ಶುರುವಾಗಿದ್ದು, ಮತ್ತೆ ಥಿಯೇಟರ್ ಬಾಗಿಲು ಮುಚ್ಚುವ ಭಯ ಶುರುವಾಗಿದೆ. ಮತ್ತೊಂದಕ್ಕೆ ಡಿಜಿಟಲ್ ಫ್ಯ್ಲಾಟ್ ಫಾರ್ಮ್ ಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಕೆಲಸ ಶುರುವಾಗಿದೆ. ಓಟಿಟಿಗೆ ಕನ್ನಡ ಸಿನಿಮಾಗಳು ಅಷ್ಟಾಗಿ ಬರ್ತಿಲ್ಲ. ಆದರೆ ಈಗ ನೇರವಾಗಿ ಟಿವಿಯಲ್ಲೇ ಸಿನಿಮಾ ರಿಲೀಸ್ ಮಾಡುವ ಪರ್ವ ಶುರುವಾಗ್ತಿದೆ. ವಿಜಯ್ ರಾಘವೇಂದ್ರ ಅಭಿನಯದ ‘ಸೀತಾರಾಮ್ ಬಿನೋಯ್’ ಚಿತ್ರವನ್ನು ಥಿಯೇಟರ್ ಮೊದಲು ಟಿವಿಯಲ್ಲಿ ಪ್ರಸಾರ ಮಾಡೋದಾಗಿ ಘೋಷಿಸಿದ್ದಾರೆ. ಇದು ಥಿಯೇಟರ್ ಗಳಿಗೆ ಕೊನೆ ಮೊಳೆ ಅನ್ನುವಂತೆ ಕಾಣ್ತಿದೆ.
ಓಟಿಟಿ ಫ್ಲಾಟ್ ಫಾರ್ಮ್ ಎಲ್ಲರೂ ಬಳಸಲ್ಲ. ಫ್ಯಾಮಿಲಿ ಎಲ್ಲಾ ಕೂತು ಮೊಬೈಲ್ ನಲ್ಲಿ ಸಿನಿಮಾ ನೋಡೋಕೆ ಆಗಲ್ಲ. ಜನ ಥಿಯೇಟರ್ ಗೆ ಬಂದೇ ಬರ್ತಾರೆ ಅನ್ನೋ ನಿರೀಕ್ಷೆ ಇತ್ತು. ನೇರವಾಗಿ ಟಿವಿಯಲ್ಲೇ ಸಿನಿಮಾ ಬಂದ ಮೇಲೆ ಜನರಿಗೆ ಥಿಯೇಟರ್ ಯಾಕೆ ಬೇಕು. ಅಲ್ಲಿಗೆ ಥಿಯೇಟರ್ ಗಳು ಶಾಶ್ವತವಾಗಿ ಬಂದ್ ಆಗಲಿದೆ. ಸೀತಾರಾಮ್ ಬಿನೋಯ್ ಚಿತ್ರವನ್ನು ಆ ರೀತಿ ಟಿವಿಯಲ್ಲಿ ಮೊದಲು ರಿಲೀಸ್ ಮಾಡೋದಾಗಿ ಚಿತ್ರತಂಡ ಘೋಷಿಸಿದೆ.
ಜನವರಿ 15ಕ್ಕೆ ಸೀತಾರಾಮ್ ಬಿನೋಯ್ ಚಿತ್ರ ಮೊದಲು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರಲಿದೆ. ಮರುದಿನ ಥಿಯೇಟರ್ ಗಳಲ್ಲಿ ಪ್ರದರ್ಶನವಾಗಲಿದೆ. ಸದ್ಯ ಥಿಯೇಟರ್ ಗಳಲ್ಲಿ 50% ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಹಾಗಾಗಿ ವ್ಯವಹಾರದ ದೃಷ್ಟಿಯಿಂದ ಚಿತ್ರತಂಡ ಇಂತಹದೊಂದು ಪ್ರಯತ್ನ ಮಾಡ್ತಿದೆ. ಇದು ನಿಜಕ್ಕೂ ಒಳ್ಳೆಯ ಪ್ರಯತ್ನ. ಆದರೆ ಮುಂದೆ ಥಿಯೇಟರ್ ಗಳ ಕಥೆ ಏನು ಅನ್ನೋ ಪ್ರಶ್ನೆ ಏಳುತ್ತದೆ.