ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಹವಾ ಹೇಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಬರೀ ಕನ್ನಡ ಪ್ರೇಕ್ಷಕರು ಮಾತ್ರವಲ್ಲ ತೆಲುಗು, ತಮಿಳು, ಹಿಂದಿ, ಮಲಯಾಳಂ ಅಷ್ಟೇ ಯಾಕೆ ವಿದೇಶದ ಸಿನಿರಸಿಕರು ಕೂಡ ರಾಕಿ ಭಾಯ್ ಆರ್ಭಟಕ್ಕೆ ಬೆರಗಾಗಿದ್ದರು. ಫಸ್ಟ್ ಚಾಪ್ಟರ್ ₹250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಾಪ್ಟರ್ 2 ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು ತೆಲುಗಿನಲ್ಲಿ ಕೆಜಿಎಫ್ ಮಾದರಿಯಲ್ಲೇ 2 ಭಾಗಗಳಾಗಿ ‘ಪುಷ್ಪ’ ಸಿನಿಮಾ ಬರ್ತಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಕ್ತ ಚಂದನ ಸ್ಮಗ್ಲರ್ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಪುಷ್ಪ ಸಿನಿಮಾವನ್ನು ಹೊಗಳುವ ಭರದಲ್ಲಿ ತೆಲುಗು ನಿರ್ದೇಶಕ ಬುಚ್ಚಿಬಾಬು ಕೆಜಿಎಫ್ ಫ್ಯಾನ್ಸ್ ನ ಕೆಣಕಿದ್ದಾರೆ. ಇದೇ ಕಾರಣಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ಫ್ಯಾನ್ಸ್ ಮತ್ತು ಪುಷ್ಪ ಫ್ಯಾನ್ಸ್ ನಡುವೆ ಕಿರಿಕ್ ಶುರುವಾಗಿದೆ.
ಸುಕುಮಾರ್ ಶಿಷ್ಯ ಬುಚ್ಚಿಬಾಬು ಇತ್ತೀಚೆಗೆ ‘ಉಪ್ಪೆನ’ ಅನ್ನೋ ಸಿನಿಮಾ ಮಾಡಿ ಗೆದ್ದಿದ್ದಾರೆ. ಇನ್ನು ‘ಪುಷ್ಪ’ ಸಿನಿಮಾ ನೋಡಿರೋ ಬುಚ್ಚಿಬಾಬು ಕೆಜಿಎಫ್ ಚಿತ್ರಕ್ಕಿಂತ ಇದು 10 ಪಟ್ಟು ದೊಡ್ಡ ಸಿನಿಮಾ ಅಂತ ಹೇಳಿದ್ದಾರೆ. ತಮ್ಮ ಗುರುಗಳಾದ ಸುಕುಮಾರ್ ನಿರ್ದೇಶನ ಮತ್ತು ಅಲ್ಲು ಅರ್ಜುನ್ ಪರ್ಫಾರ್ಮೆನ್ಸ್ ನ ಹಾಡಿ ಕೊಂಡಾಡಿದ್ದಾರೆ. ಇದೇ ಕಾರಣಕ್ಕೆ ಕೆಜಿಎಫ್ ಫ್ಯಾನ್ಸ್ ಮತ್ತು ಪುಷ್ಪ ಫ್ಯಾನ್ಸ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ನಡೀತಿದೆ. ಕೆಜಿಎಫ್ ಒಂದು ಬ್ರ್ಯಾಂಡ್ ಅದಕ್ಕೆ ಪುಷ್ಪ ಸರಿ ಹೋಗೋದಿಲ್ಲ ಅನ್ನೋದು ಇವರ ವಾದ. ಟೀಸರ್ ಕೂಡ ಅಷ್ಟರಲ್ಲೇ ಇದೆ. ಜಾಸ್ತಿ ಬಿಲ್ಡಪ್ ಕೊಟ್ಟು ಯಡವಟ್ಟಾದ್ರೆ, ಸಿನಿಮಾ ಮಕಾಡೆ ಮಲಗುತ್ತೆ ಅಂತಿದ್ದಾರೆ. ಇದಕ್ಕೆ ತೆಲುಗು ಕೆಜಿಎಫ್ ಅಭಿಮಾನಿಗಳು ದನಿಗೂಡಿಸಿದ್ದಾರೆ.
ಅಲ್ಲು ಅರ್ಜುನ್ ಫ್ಯಾನ್ಸ್ ಮಾತ್ರ ಇದನ್ನ ಒಪ್ಪಿಕೊಳ್ಳೊಕೆ ರೆಡಿಯಿಲ್ಲ. ಬುಚ್ಚಿಬಾಬು ಪುಷ್ಪ ಸಿನಿಮಾ ಬಗ್ಗೆ ಈ ತರ ಹೇಳಿದ್ದಾರೆ ಅಂದ್ರೆ, ಸಿನಿಮಾ ಬ್ಲಾಕ್ ಬಸ್ಟರ್ ಪಕ್ಕಾ ಅನ್ನೋದು ಅವರ ವಾದ. ಅಂದ ಹಾಗೆ ಪುಷ್ಪ ಸಿನಿಮಾ ನಿರ್ಮಾಪಕರು ಕೂಡ ವಿತರಕರ ಬಳಿ ಇದು ಕೆಜಿಎಫ್ ಗಿಂತ ದೊಡ್ಡ ಸಿನಿಮಾ ಅಂತ ಹೇಳಿಕೊಂಡು ಭಾರೀ ಮೊತ್ತ ಕೇಳ್ತಿದ್ದಾರಂತೆ. ಇದನ್ನೆಲ್ಲಾ ನೋಡಿ ಯಾಕೋ ಪುಷ್ಪ ಸಿನಿಮಾ ಠುಸ್ ಪಟಾಕಿ ಆಗುತ್ತೆ ಅದಕ್ಕೆ ಇಷ್ಟೆಲ್ಲಾ ಹೈಪ್ ಕ್ರಿಯೇಟ್ ಮಾಡ್ತಿದ್ದಾರೆ ಅಂತ ಟಾಲಿವುಡ್ ನಲ್ಲಿ ಚರ್ಚೆ ಆಗ್ತಿದೆ.