ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ವ ಪರಿಸರ ದಿನಕ್ಕಾಗಿ ಮೃಗಾಲಯದಲ್ಲಿರೋ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆಯುವಂತೆ ಅಭಿಮಾನಿಗಳು ಹಾಗೂ ಕರ್ನಾಟಕದ ಜನರಲ್ಲಿ ಮಾನವಿ ಮಾಡಿಕೊಂಡಿದ್ದರು. ದಚ್ಚು ಮಾತಿಗೆ ಬೆಲೆಕೊಟ್ಟ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿರೋ ಸುಮಾರು 9 ಮೃಗಾಲಯಗಳಿಂದ ಕೋಟಿಗಟ್ಲೇ ಹಣ ಸಂಗ್ರಹವಾಗಿದೆ. ಇದೇ ವೇಳೆ ದರ್ಶನ್ ಕರೆಗೆ ಸ್ಪಂದಿಸಿರೋ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೈಸೂರಿನ ಮೃಗಾಲಯದಲ್ಲಿ ಆನೆಯನ್ನು ದತ್ತು ಪಡೆದಿದ್ದಾರೆ.
ದರ್ಶನ್ ಅಭಿಮಾನಿಗಳು ಹಾಗೂ ಪ್ರಾಣಿ-ಪಕ್ಷಿಯರು ದತ್ತು ಪಡೆದ ಹಣ ಕೋಟಿ ದಾಟಿದೆ. ಕೇವಲ 5 ದಿನಗಳಲ್ಲಿ ಝೂ ಆಫ್ ಕರ್ನಾಟಕಕ್ಕೆ ಸುಮಾರು ಒಂದು ಕೋಟಿ ದೇಣಿಗೆ ಸಂಗ್ರಹವಾಗಿದೆ. ಈ ಬೆನ್ನಲ್ಲೇ ರಿಯಲ್ ಸ್ಟಾರ್ ಉಪೇಂದ್ರ ಕೂಡ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದ ಆನೆಯನ್ನು ದತ್ತು ಪಡೆದಿದ್ದಾರೆ. ಇದು ಆಫ್ರಿಕನ್ ಆನೆಯಾಗಿದ್ದು, ಒಂದು ಮುಕ್ಕಾಲು ಲಕ್ಷ ಪಾವತಿಸಿ ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ.
‘‘ಪ್ರಾಣಿಗಳೇ ಗುಣದಲಿ ಮೇಲು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ. -ನಿಮ್ಮ ಉಪೇಂದ್ರ’’ ಎಂದು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಮೂಲೆ ಮೂಲೆಯಿಂದ ದರ್ಶನ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ಪ್ರವಾಸಿಗರಿಲ್ಲದೆ ಮೃಗಾಲಯದ ಪ್ರಾಣಿ-ಪಕ್ಷಿಗಳ ನಿರ್ವಹಣೆಗೆ ಪರದಾಡುತ್ತಿದ್ದ ಸಿಬ್ಬಂದಿಗಳಿಗೆ ದರ್ಶನ್ ಆರಂಭಿಸಿದ ಈ ಅಭಿಯಾನ ಪ್ರಾಣಿ-ಪಕ್ಷಿಗಳ ಜೀವ ಉಳಿಸಿದೆ.