-ರಾಜ್ಯಕ್ಕೆ ರಾಜ್ಯಪಾಲರಾಗಿ ಬಂದ ದಲಿತ ನಾಯಕ…!
-ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹಲೋತ್ !
ಕರ್ನಾಟಕದ ರಾಜಭವನಕ್ಕೆ ನೂತನ ಅತಿಥಿಯ ಎಂಟ್ರಿಯಾಗ್ತಿದೆ. ರಾಜ್ಯದ ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹಲೋತ್ ನೇಮಕವಾಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿರುವ ಬಿಜೆಪಿಯ ಹಿರಿಯ ನಾಯಕ ಥಾವರ್ ಚಂದ್ ಗೆಹಲೋತ್ ಅವರನ್ನು ರಾಜ್ಯಪಾಲರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಆ ಮೂಲಕ ಪಕ್ಷದ ನಿಷ್ಠಾವಂತ ನಾಯಕನಿಗೆ ಗೌರವದ ಹುದ್ದೆಯನ್ನು ದಯಪಾಲಿಸಲಾಗಿದೆ. ಥಾವರ್ ಚಂದ್ ಗೆಹಲೋತ್ ಮಧ್ಯಪ್ರದೇಶದ ಪ್ರಭಾವಿ ದಲಿತ ನಾಯಕ. ಪ್ರಖಂಡ ವಾಗ್ಮಿಯಾಗಿದ್ದ, ಸಂಘಟನಾ ಚತುರನಾಗಿದ್ದ ಗೆಹಲೋತ್ ಅವರು ಜನಸಂಘದ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟವರು. ಪ್ರಬಲ ಕಾಂಗ್ರೆಸ್ ವಿರುದ್ಧ ನಡೆಸಿದ ನಿರಂತರ ಹೋರಾಟದ ಫಲವಾಗಿ ಮೂರು ಬಾರಿ ಶಾಸಕರಾಗಿ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಹೆಜ್ಜೆಗುರುತು ಮೂಡಿಸಿದವರು.
ಮಧ್ಯಪ್ರದೇಶದಲ್ಲಿನ ಪ್ರಖರ ಸಂಘಟನಾತ್ಮಕ ನಡವಳಿಕೆಯನ್ನು ಕಂಡಿದ್ದ ಅಂದಿನ ಪ್ರಧಾನಿ ವಾಜಪೇಯಿ ಅವರ ಕಣ್ಣಿಗೆ ಬಿದ್ದ ಥಾವರ್ ಚಂದ್ ಗೆಹಲೋತ್ ಮುಂದೆ ಕೇಂದ್ರದತ್ತ ಚಿತ್ತ ಹರಿಸುವಂತಾಯಿತು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಗೆಹಲೋತ್ ಈಗ ಹಾಲಿ ರಾಜ್ಯಸಭಾ ಸದಸ್ಯ. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇನ್ನೂ ಮೂರು ವರ್ಷ ಇರುವಾಗಲೇ ಅವರನ್ನು ರಾಜ್ಯಪಾಲರಾಗಿ ನೇಮಕ ಮಾಡಿರುವುದು ವಿಶೇಷ. ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಂಪುಟ ದರ್ಜೆ ಸಚಿವರಾಗಿರುವ ಥಾವರ್ ಚಂದ್ ಗೆಹಲೋತ್ ಪ್ರಬಲ ದಲಿತ ನಾಯಕ.
ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸಿದ ಹೋರಾಟದಿಂದ ಕೇಂದ್ರದ ಇಮೇಜ್ ಗೆ ಧಕ್ಕೆಯಾಗೋದನ್ನು ತಡೆಯುವ ಸಾಹಸ ಮಾಡಿದ ಕೀರ್ತಿ ಈ ಥಾವರ್ ಚಂದ್ ಗೆಹಲೋತ್ ಅವರಿಗಿದೆ. ಇವರಿಗೂ ಮತ್ತು ಕರ್ನಾಟಕಕ್ಕೂ 2013 ರಿಂದಲೂ ಸಂಬಂಧವಿದೆ ಅಂದರೆ ಅಚ್ಚರಿಯಾಗುತ್ತದೆ. ಯಾಕೆಂದ್ರೆ ಇವರು 2013 ರಲ್ಲಿ ರಾಜ್ಯದ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದವರು.
ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿ ಬಿಜೆಪಿ ಸೋಲಿಗೆ ಕಾರಣವಾದ ದಿನಗಳಲ್ಲಿ ಪಕ್ಷವನ್ನು ಕಟ್ಟಬೇಕಾದ ಸವಾಲಿನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಂತದಲ್ಲಿ ರಾಜ್ಯದ ಬಿಜೆಪಿ ಉಸ್ತುವಾರಿಯಾಗಿ ನೇಮಕವಾಗಿದ್ದ ಥಾವರ್ ಚಂದ್ ಗೆಹಲೋತ್ ಅವರು, ಸಂಘಟನಾತ್ಮಕವಾಗಿ ಪಕ್ಷವನ್ನು ಕಟ್ಟಲು ಮಾರ್ಗದರ್ಶಕರಾಗಿ ಕೆಲಸ ಮಾಡಿದವರು.
ಕೆಜೆಪಿಯಿಂದ ಶಾಸಕರಾಗಿದ್ದ ಯಡಿಯೂರಪ್ಪ ಅವರು ಮರಳಿ ಬಿಜೆಪಿಗೆ ಬರುವಲ್ಲಿ ಥಾವರ್ ಚಂದ್ ಗೆಹಲೋತ್ ಅವರ ಪ್ರಯತ್ನ ಮರೆಯುವಂತಿಲ್ಲ. ಧರ್ಮೇಂದ್ರ ಪ್ರಧಾನ್ ಅವರು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ರಾಜ್ಯಕ್ಕೆ ಬರುವ ತನಕ ಯಡಿಯೂರಪ್ಪರನ್ನು ಪಕ್ಷಕ್ಕೆ ಮರಳಿ ಕರೆತರುವ ಯತ್ನ ಮಾಡುವಲ್ಲಿ ಸಾಕಷ್ಟು ಪ್ರಯತ್ನ ಮಾಡಿದ್ದರು. ಅಂತು 2013 ರಲ್ಲಿ ರಾಜ್ಯದಲ್ಲಿ ಬಿಜೆಪಿ ಉಸ್ತುವಾರಿಯಾಗಿದ್ದ ಥಾವರ್ ಚಂದ್ ಗೆಹಲೋತ್ ಅವರು ರಾಜ್ಯದ ನೂತನ ರಾಜ್ಯಪಾಲರಾಗಿ ಸಂವಿಧಾನಬದ್ಧ ಗೌರವಕ್ಕೆ ಪಾತ್ರರಾಗಿದ್ದಾರೆ.
ವೆಲ್ ಕಮ್ ಥಾವರ್ ಚಂದ್ ಗೆಹಲೋತ್ ಸರ್……!