ನವರಸನಾಯಕ ಜಗ್ಗೇಶ್ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಕ್ಕಿಕೊಳ್ಳುತ್ತಲೇ ಇರ್ತಾರೆ. ಅವರೊಂದು ಮಾತು ಹೇಳೋದು, ಅದನ್ನು ಉಳಿದವರು ಇನ್ನೇನೋ ಆಗಿ ರ್ಥೈಸಿಕೊಳ್ಳೋದು, ಆಮೇಲೆ ಜಗ್ಗೇಶ್ ಅದಕ್ಕೊಂದು ಸಮಜಾಯಿಷಿ ಕೊಡೋದು ಇದೆಲ್ಲಾ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಈಗ ಜಗ್ಗೇಶ್ ಹೊಸಾ ವಿವಾದದ ಕೇಂದ್ರಬಿಂದುವಾಗಿದ್ದು ಜಗ್ಗೇಶ್ ಹೇಳಿಕೆಗೆ ಕೃಷಿ ಸಚಿವರೂ ಆಗಿರುವ ನಟ ಬಿ ಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಜಗ್ಗೇಶ್, ‘ಇಂದು ಯಾರ್ಯಾರೋ ಹೀರೋಗಳಾಗುತ್ತಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳನ್ನಷ್ಟೆ ನೋಡಿ, ಹೆಚ್ಚಾಗಿ ಸಿನಿಮಾ ನೋಡಲು ಹೋಗಬೇಡಿ’ ಎಂದು ಹೇಳಿದ್ದರು. ಅವರ ಈ ಮಾತಿಗೆ ಚಿತ್ರರಂಗದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸಿನಿಮಾದಿಂದಲೇ ಬೆಳೆದು ಎಲ್ಲವನ್ನು ಸಂಪಾದಿಸಿದ ಇವರು ಈಗ ಸಿನಿಮಾಗಳನ್ನು ನೋಡಬೇಡಿ ಎಂದು ಹೇಳುತ್ತಿದ್ದಾರೆ ಎಂದು ಅನೇಕರು ಟೀಕಿಸಿದ್ದರು.
ಜಗ್ಗೇಶ್ ಹೇಳಿಕೆಯನ್ನು ಕೃಷಿ ಸಚಿವ ಹಾಗೂ ನಟ ಬಿಸಿ ಪಾಟೀಲ್ ಟ್ವಿಟ್ಟರ್ ಮೂಲಕ ಖಂಡಿಸಿದ್ದಾರೆ. ‘ಯುವಕರನ್ನು, ಹೊಸಬರನ್ನು ಪ್ರೋತ್ಸಾಹಿಸಬೇಕೇ ಹೊರತು ಈ ರೀತಿ ಹೊಸಪ್ರತಿಭೆಗಳನ್ನು, ಹೊಸ ಕಲಾವಿದರನ್ನು ನಿರುತ್ಸಾಹಗೊಳಿಸುವಂತಹ ಹೇಳಿಕೆಗಳನ್ನು ನೀಡಬಾರದು” ಎಂದು ಟ್ವೀಟ್ ಮಾಡಿದ್ದಾರೆ. ಬಿ ಸಿ ಪಾಟೀಲ್ ಅವರ ಈ ಟ್ವೀಟ್ ಗೆ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಮಾತಿನ ನಿಜವಾದ ಅರ್ಥವೇನು ಎನ್ನುವುದನ್ನು ಸವಿವರವಾಗಿ ತಿಳಿಸಿದ್ದಾರೆ. ನನ್ನ ಮಾತು ಸರಿಯಾಗಿ ಅರ್ಥೈಸಿಲ್ಲಾ. ನಾನು ಹೇಳಿದ್ದು ನಮ್ಮ ಕಲೆಯನ್ನು ನಿಮ್ಮ 2 ಗಂಟೆಗಳ ಸಂತೋಷಕ್ಕೆ ಮಾತ್ರ ಬಳಸಿಕೊಳ್ಳಿ. ಮಿಕ್ಕಂತೆ ನೀವು ನಿಮ್ಮ ತಂದೆ, ತಾಯಿ, ಸಮಾಜಕ್ಕೆ ನಾಯಕರಾಗಿ. ನಿಮ್ಮ ರಸ್ತೆ, ನಿಮ್ಮ ಸಮಾಜ, ನಿಮ್ಮ ದೇಶಕ್ಕೆ ಹೀರೋ ಆಗಿರಿ. ನನ್ನನ್ನೂ ಸೇರಿದಂತೆ ಸಿನಿಮಾ ನಾಯಕರು ನಿಮ್ಮನ್ನು ರಂಜಿಸುವವರು ಮಾತ್ರ” ಎಂದು ಜಗ್ಗೇಶ್ ಮತ್ತೆ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯದ ವಕ್ತಾರನಾಗಿ ತಳಮಟ್ಟದಿಂದ ನಿಯುಕ್ತಿಯಾದ ಮಾಧ್ಯಮ ವಕ್ತಾರರಿಗೆ ನಡೆದ ಕಾರ್ಯಗಾರದಲ್ಲಿ ಜಗ್ಗೇಶ್ ಮಾತನಾಡಿದ್ದರು. ”ಯುವ ಪೀಳಿಗೆ ಸಿನಿಮಾಗಿಂತ ಹೆಚ್ಚಾಗಿ ಸಮಾಜಕ್ಕೆ ಬಳಕೆಯಾಗುವಂತೆ ಮಾಡಿ. ಕಡ್ಡಾಯವಾಗಿ ಪತ್ರಿಕೆ ಓದಿ, ಮಾಧ್ಯಮದ ಜೊತೆ ಉತ್ತಮ ಸಂಬಂಧ ಹೊಂದಿ. ನಮ್ಮ ಪಕ್ಷದ ತಳಮಟ್ಟದ ಸೈನಿಕರಂತೆ ಕೆಲಸ ಮಾಡಿ” ಎಂದು ಜವಾಬ್ದಾರಿಯಿಂದ ಮಾಧ್ಯಮ ಕಾರ್ಯಾಗಾರದಲ್ಲಿನ ಮಂಥನದಲ್ಲಿ 3 ಜಿಲ್ಲೆಯ ವಕ್ತಾರರು, ಸಂಘದ ಹಿರಿಯರು, ಶಾಸಕರ ಸಭೆಯಲ್ಲಿ ಉಧ್ಘಟಕನಾಗಿ ನುಡಿದದ್ದು ಹೇಗೆ ನಿಮಗೆ ಅಪಾರ್ಥವಾಗಿ ಕೇಳಿಸಿತು ನಾಕಾಣೆ?” ಎಂದು ಸ್ಪಷ್ಟನೆ ನೀಡಿದ್ದಾರೆ
ಕೆಲವರ ಅಪಾರ್ಥಕ್ಕೆ ನಾ ಉತ್ತರಿಸಲಿಲ್ಲಾ. ತಮ್ಮ ಅಪಾರ್ಥಕ್ಕೆ ಉತ್ತರಿಸಿರುವೆ. ಕಡೆಯಿಂದ ಬೆಳೆದು ಕಲೆ ತೆಗಳಲಿಲ್ಲಾ ಬದಲಾಗಿ ಯುವ ಸಮುದಾಯಕ್ಕೆ ಹೆಚ್ಚು ಜವಾಬ್ದಾರಿಯಿದೆ ಎಂದಿರುವೆ. ಬಹುಶ ತಮಗೆ ವಿಷಯ ಅರಿಯಿತು ಎಂದು ಆತ್ಮಿಯವಾಗಿ ಭಾವಿಸುವೆ” ಎಂದು ಜಗ್ಗೇಶ್ ಸಮಾಧಾನವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂದು ಒಂದು ಮಾತಿಗೆ ನೂರು ತಪ್ಪು ಹುಡುಕಿ ಕೆಣಕಿ ಜೀವಿಸುವವರ ಮಧ್ಯದಲ್ಲಿ ಬದುಕಬೇಕು. ಒಳ್ಳೆಯ ಮಾತು ಅಪಾರ್ಥ ಮಾಡಿಕೊಂಡರೆ ಉತ್ತಮ ಮಾತು ಮೌನವಾಗಿ ಆತ್ಮದಲ್ಲೆ ಉಳಿಯುತ್ತದೆ. ಹಾಗಾಗದಿರಲಿ, ನೇರ ನುಡಿಯುವವನ ಮಾತುಗಳು. ನಿಮ್ಮ ಕಾರ್ಯ ರೈತರಪರವಾಗಿ ಯಶಸ್ವಿಯಾಗಲಿ ಶುಭಹಾರೈಕೆ. ರಾಜ್ಯ ವಕ್ತಾರನಾಗಿ ಸ್ನೇಹಿತನಾಗಿ. ಧನ್ಯವಾದ” ಎಂದು ಜಗ್ಗೇಶ್ ಕೃಷಿ ಸಚಿವ ಬಿಸಿ ಪಾಟೀಲ್ ಅವರಿಗೆ ಉತ್ತರಿಸಿದ್ದಾರೆ.