ರಜನಿಕಾಂತ್ ಯಾರಿಗೆ ಗೊತ್ತಿಲ್ಲ ಹೇಳಿ. ರಜನಿ ಸ್ಟೈಲ್, ರಜನಿ ಮ್ಯಾನರಿಸಂಗೆ ಮಾರು ಹೋಗದೆ ಇರೋರು ಯಾರಾದ್ರೂ ಇದ್ದಾರಾ? ರಜನಿ ಅಂದ್ರೆ ಹಾಗೆ ಸಾಮಾನ್ಯ ಮನುಷ್ಯನಲ್ಲಿ ಸೂಪರ್ಸ್ಟಾರ್ ಬೆರೆತು ಹೋಗಿದ್ದಾರೆ. ಅಷ್ಟಕ್ಕೂ ರಜನಿಕಾಂತ್ ಬಗ್ಗೆ ಈಗ ಇಷ್ಟೊಂದು ಮಾತಾಡ್ತಿರೋದಕ್ಕೆ ಕಾರಣ ಮುಂಬೈನಲ್ಲಿರೋ ಒಂದು ದೋಸೆ ಅಂಗಡಿ.
ಮುಂಬೈನ ದಾದರ್ ಏರಿಯಾದಲ್ಲಿ ಮುತ್ತು ಅಣ್ಣ ದೋಸಾ ಸೆಂಟರ್ ಇದೆ. ಇದು ರಸ್ತೆ ಬದಿಯ ದೋಸೆ ಮಾಡೋ ಮಿನಿ ಕ್ಯಾಂಟೀನ್. ಈ ದೋಸೆ ಅಂಗಡಿ ಮಾಲೀಕ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ಬಿಟ್ಟಿದ್ದಾನೆ. ದೋಸೆ ಅಂಗಡಿ ಮಾಲೀಕ ಮುತ್ತು ಅಣ್ಣ ಈಗ ಸದ್ಯದ ಸ್ಟಾರ್. ಈತ ದೋಸೆ ಮಾಡೋ ರೀತಿ, ಆ ಸ್ಪೀಡು, ಸ್ಟೈಲ್ ಎಲ್ಲವೂ ರಜನಿಯನ್ನ ನೆನಪಿಸುತ್ತಿದೆ.
ಈ ದೋಸೆ ಅಂಗಡಿ ಮಾಲೀಕ ಮುತ್ತು ಅಣ್ಣ ಮೂಲತಃ ತಮಿಳುನಾಡಿನವನು. ಹೊಟ್ಟೆಪಾಡಿಗಾಗಿ ಮುಂಬೈ ಸೇರಿ ಕಳೆದ 30 ವರ್ಷ ಆಗಿದೆ. ಅಲ್ಲೇ ದೋಸೆ ಅಂಗಡಿ ಇಟ್ಟುಕೊಂಡು, ಬಗೆಬಗೆಯ ದೋಸೆಗಳನ್ನ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರ ಬಳಿ ಮೈಸೂರು ದೋಸೆ, ಮಸಾಲೆ ದೋಸೆ, ಬೆಣ್ಣೆ ದೋಸೆ, ತಮಿಳುನಾಡು ಸ್ಪೆಷಲ್ ಹೀಗೆ ಬಗೆಯ ದೋಸೆಗಳನ್ನು ಸವಿಯೋಕೆ ಅಂತಲೇ ಜನ ಬರ್ತಾರೆ. ಆದ್ರೆ, ದೋಸೆ ತಿನ್ನೋಕೆ ಅಂತ ಬಂದೋರಿಗೆ ಇವರ ದೋಸೆಗಿಂತ ದೋಸೆ ಮಾಡಿ ತಟ್ಟೆಗೆ ಹಾಕೋ ಸ್ಟೈಲ್ ಭಾರೀ ಇಷ್ಟ ಆಗ್ಬಿಟ್ಟಿದೆ.
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸ್ಟೈಲ್ ಹಾಗೂ ಮ್ಯಾನರಿಸಂಗಳಿಂದ ಜನರನ್ನು ಹುಚ್ಚೆಬ್ಬಿಸಿದ್ದಾರೆ. ತಲೈವಾ ಸ್ಟೈಲ್ ತೆರೆ ಮೇಲಷ್ಟೇ ಅಲ್ಲಾ, ಅಭಿಮಾನಿಗಳು ತೆರೆ ಹಿಂದೆನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ದೋಸೆ ಮುತ್ತು ಅಣ್ಣ ಕೂಡಾ ರಜನಿ ಅಭಿಮಾನಿ. ಹಾಗಾಗಿ ಕಣ್ಮುಚ್ಚಿ ಕಣ್ಬಿಡೋದ್ರೊಳಗೆ ದೋಸೆಗಳನ್ನ ತೆಗೆದು ಪ್ಲೇಟಿಗೆ ಹಾಕಿ ಬಿಡ್ತಾರೆ. ಇದೇ ವಿಡಿಯೋವನ್ನ ಮಿಲಿಯನ್ ಗಟ್ಟಲೆ ಜನ ನೋಡಿ ಖುಷಿಪಡ್ತಿದ್ದಾರೆ.