ತಮಿಳುನಾಡಿನಲ್ಲಿ ಇಂದು ಚುನಾವಣೆ ನಡೆದಿದ್ದು ಅನೇಕ ಖ್ಯಾತ ತಮಿಳು ಕಲಾವಿದರು ತಂತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಚಲಾಯಿಸಿದ್ದಾರೆ. ಎಷ್ಟು ದೊಡ್ಡವರೇ ಆಗಲಿ, ನಾಗರಿಕ ಸಮಾಜದಲ್ಲಿ ಪ್ರಜಾಪ್ರಭತ್ವ ನೀಡಿರುವ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಬೇಕು ಎಂದು ಈ ಎಲ್ಲಾ ಸೂಪರ್ ಸ್ಟಾರ್ಸ್ ನಿರೂಪಿಸಿದರು.
ಸೂಪರ್ಸ್ಟಾರ್ ರಜನಿಕಾಂತ್ ತಮ್ಮ ಮತವನ್ನು ಥೌಸೆಂಡ್ ಲೈಟ್ಸ್ ವಿಧಾನಸಭಾ ಕ್ಷೇತ್ರದ ಸ್ಟೆಲ್ಲಾ ಮೇರಿಸ್ ಮತಗಟ್ಟೆಯಲ್ಲಿ ಚಲಾಯಿಸಿದರು. ತಲೈವಾ ನೋಡೋಕೆ ಅಭಿಮಾನಿಗಳ ದೊಡ್ಡ ಹಿಂಡೇ ಬಂದಿದ್ರೂ ಪೋಲೀಸರು ಯಶಸ್ವಿಯಾಗಿ ಅವರನ್ನು ತಡೆದರು.


ಇನ್ನು ಸಹೋದರರಾದ ಸೂರ್ಯ ಶಿವಕುಮಾರ್ ಮತ್ತು ಕಾರ್ತಿ ಶಿವಕುಮಾರ್ ಬೆಳಗ್ಗೆ ಬೇಗನೇ ತಮ್ಮ ಮತಗಟ್ಟೆಗೆ ತೆರಳಿದರು. ಹೆಚ್ಚು ಜನ ಸೇರುವ ಮೊದಲೇ ಓಟ್ ಮಾಡುವ ಉದ್ದೇಶ ಅವರಿಗಿತ್ತು.


ಎಲ್ಲರಿಗಿಂತ ಮತದಾನದ ದಿನ ಗಮನ ಸೆಳೆದಿದ್ದು ಇಳಯದಳಪತಿ ವಿಜಯ್. ಸೈಕಲ್ ಮೇಲೆ ಮತಗಟ್ಟೆಗೆ ಆಗಮಿಸಿದ ಅವರು ಪೆಟ್ರೋಲ್ ಬೆಲೆಯೇರಿಕೆ ಬಗ್ಗೆ ಕೇಂದ್ರದ ವಿರುದ್ಧ ತಮ್ಮ ಅಸಮಾಧಾನವನ್ನು ಹೀಗೆ ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.


ಇನ್ನು ಮಕ್ಕಳ್ ನೀದಿ ಮೈಯಮ್ ಪಕ್ಷದ ಸಂಸ್ಥಾಪಕರೂ ಆಗಿರುವ ಕಲಾವಿದ ಕಮಲ್ ಹಾಸನ್ ತಮ್ಮ ಮಕ್ಕಳಾದ ಶೃತಿ ಹಾಸನ್ ಮತ್ತು ಅಕ್ಷರ ಹಾಸನ್ ಜೊತೆಯಲ್ಲಿ ತೇನಂಪೇಟ್ನ ಚೆನ್ನೈ ಹೈಸ್ಕೂಲ್ನಲ್ಲಿ ಮತ ಚಲಾಯಿಸಿದರು.


ತಿರುವನ್ಮುಯಿರ್ ಮತಗಟ್ಟೆ ತೆರೆಯುವ 20 ನಿಮಿಷಗಳಿಗೆ ಮುನ್ನವೇ ಓಟ್ ಮಾಡಲು ಆಗಮಿಸಿದ್ದು ತಲಾ ಅಜಿತ್ ಮತ್ತು ಪತ್ನಿ ಶಾಲಿನಿ. ಸರತಿಯಲ್ಲಿ ನಿಂತಿದ್ದ ಇವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಆ ಸಂದರ್ಭದಲ್ಲಿ ಮಾಸ್ಕ್ ಧರಿಸದ ನಾಗರಿಕರೊಬ್ಬರ ಫೋನ್ ಪಡೆದ ಅಜಿತ್ ಮಾಸ್ಕ್ ಧರಿಸುವಂತೆ ಎಚ್ಚರಿಸಿ ನಂತರ ಫೋನ್ ಮರಳಿಸಿದ ಘಟನೆಯೂ ನಡೆಯಿತು.

