ಕಿಚ್ಚ ಸುದೀಪ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾಯ್ತಾನೇ ಇದ್ದಾರೆ. ಕೋಟಿಗೊಬ್ಬ 3 ಬಿಡುಗಡೆಗೆ ಸಜ್ಜಾಗಿದೆ. ಸೆಪ್ಟೆಂಬರ್ 02ರಂದು ಕಿಚ್ಚನ ಬರ್ತ್ಡೇ ದಿನವೇ ಈ ಸಿನಿಮಾದ ಬಿಡುಗಡೆ ದಿನ ಹೊರಬೀಳಲಿದೆ ಎನ್ನಲಾಗುತ್ತಿದೆ. ಇನ್ನೊಂದ್ಕಡೆ ಅನೂಪ್ ಬಂಡಾರಿ ನಿರ್ದೇಶನದ ವಿಕ್ರಾಂತ್ ರೋಣಾ ಸಿನಿಮಾದ ಕೆಲಸ ಕೂಡ ಭರದಿಂದ ನಡೆಯುತ್ತಿದೆ. ಈ ಮಧ್ಯೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಇತ್ತೀಚೆಗೆ ತಮಿಳು ನಿರ್ದೇಶಕ ವೆಂಕಟ್ ಪ್ರಭು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಸ್ವತ: ಕಿಚ್ಚ ಸುದೀಪ್ ತಮ್ಮ ಕೈಯ್ಯಾರೆ ಅಡುಗೆ ಮಾಡಿ ಬಡಿಸಿದ್ದರು. ಈ ವಿಷ್ಯವನ್ನು ವೆಂಕಟ್ ಪ್ರಭು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘‘ ಅಬ್ಬ ಎಂಥಾ ಅದ್ಭುತ ಆತಿಥ್ಯ, ಕಿಚ್ಚ ಸುದೀಪ್ ಧನ್ಯವಾದಗಳು. ನೀವು ಅತ್ಯುತ್ತಮ ಬಾಣಸಿಗ, ನಮ್ಮ ಮುಂದಿನ ಸಿನಿಮಾಗಾಗಿ ಎದುರು ನೋಡುತ್ತಿದ್ದೇನೆ.’’ ಎಂದು ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ನಲ್ಲಿ ನಮ್ಮ ಮುಂದಿನ ಸಿನಿಮಾಗಾಗಿ ಕಾಯುತ್ತಿದ್ದೇನೆ ಎಂದು ಹೇಳಿರುವುದರಿಂದ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡೋದು ಪಕ್ಕಾ ಅಂತಾಗಿದೆ. ಆದರೆ, ವೆಂಕಟ್ ಪ್ರಭು ಕನ್ನಡ ಸಿನಿಮಾ ನಿರ್ದೇಶನ ಮಾಡುತ್ತಾರೋ.. ಇಲ್ಲಾ ತಮಿಳು ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೋ.. ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೋ ಅನ್ನುವ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
ಸೆಪ್ಟೆಂಬರ್ 2 ರಂದು ಕಿಚ್ಚನ ಬರ್ತ್ಡೇ ಇರೋದ್ರಿಂದ ಅಂದೇ ಹೊಸ ಸಿನಿಮಾಗಳು ರಿವೀಲ್ ಆಗುವ ಸಾಧ್ಯತೆಯಿದೆ. ಇನ್ಮುಂದೆ ಕಿಚ್ಚ ಸುದೀಪ್ ನಟಿಸೋ ಎಲ್ಲಾ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ಆಗಿರುತ್ತೆ ಅನ್ನೋ ಮಾತುಗಳೂ ಕೇಳಿಬರ್ತಿವೆ. ಇದಕ್ಕೆಲ್ಲಾ ಅತೀ ಶೀಘ್ರದಲ್ಲೇ ಉತ್ತರ ಸಿಗಲಿದೆ.