ಸೂಪರ್ಸ್ಟಾರ್ ರಜನಿಕಾಂತ್ ಅನಾರೋಗ್ಯದ ಬಗ್ಗೆ ಆಗಾಗ ವದಂತಿಗಳು ಕೇಳಿಬರುತ್ತಲೇ ಇವೆ. ಕೆಲವು ದಿನಗಳ ಹಿಂದೆ ರಜನಿಕಾಂತ್ ಆರೋಗ್ಯ ತಪಾಸಣೆಗಾಗಿ ವಿಶೇಷ ವಿಮಾನದಲ್ಲಿ ಅಮೆರಿಕಗೆ ಹೋಗಲಿದ್ದಾರೆ. ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಕೂಡ ಬರೆದಿದ್ದಾರೆಂದು ವರದಿಯಾಗಿತ್ತು. ಅದರಂತೆ ಕಬಾಲಿ ನಟ ಅಮೆರಿಕಗೆ ಹೋಗಿದ್ದಾರೆಂದು ವರದಿಯಾಗಿದೆ.
ರಜನಿಕಾಂತ್ ಅಣ್ಣಾತ್ತೈ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ಹೈದ್ರಾಬಾದಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ವೇಳೆ ರಾಜಕೀಯ ಪಕ್ಷ ಘೋಷಿಸಿದ್ದರಿಂದ ರಜನಿಕಾಂತ್ ಒತ್ತಡದಲ್ಲಿದ್ದು, ಅನಾರೋಗ್ಯಕ್ಕೆ ಕಾರಣವೆಂದು ಹೇಳಲಾಗಿತ್ತು. ಬಳಿಕ ರಜನಿ ಕೂಡ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲವೆಂದು ಹೇಳಿದ್ದರು.
ಕೇಂದ್ರ ಸರ್ಕಾರ ರಜನಿಕಾಂತ್ ಮನವಿಗೆ ಸ್ಪಂಧಿಸಿದ ಬೆನ್ನಲ್ಲೇ ಸೋಮವಾರ ಮಧ್ಯಾಹ್ನ ಫ್ಯಾಮಿಲಿ ಜೊತೆ ಅಮೆರಿಕಗೆ ತೆರಳಿದ್ದಾರೆ. ಈಗಾಗ್ಲೇ ಧನುಷ್ ಹಾಗೂ ಪತ್ನಿ,ಮಗ ಅಮೆರಿಕದಲ್ಲಿ ನೆಲೆಸಿದ್ದು, ಧನುಷ್ ಹಾಲಿವುಡ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಸಮಯದಲ್ಲಿ ರಜನಿಕಾಂತ್ ಕೂಡ ಆರೋಗ್ಯ ತಪಾಸಣೆಗೆಂದು ಅಮೆರಿಕಗೆ ತೆರಳಿದ್ದಾರೆ.
ರಜನಿ ಅಮೆರಿಕಗೆ ಹಾರಿದ್ದು, ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ತಲೈವಾ ಅದ್ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ? ಅವ್ರಿಗೆ ಏನಾಗಿದೆ? ಎಂಬ ಗೊಂದಲಕ್ಕೆ ಬಿದ್ದಿದ್ದಾರೆ. ಆದ್ರೆ, ರಜನಿಕಾಂತ್ ಸಹಜವಾಗಿ ಆರೋಗ್ಯ ತಪಾಸಣೆಗೆಂದು ಅಮೆರಿಕಗೆ ಆಗಾಗ ಹೋಗ್ತಾರೆ. ಈ ಬಾರಿ ಕೂಡ ಆರೋಗ್ಯ ತಪಾಸಣೆಗೆಂದು ಹೋಗಿದ್ದು, ಆತಂಕ ಪಡುವ ಅಗತ್ಯವಿಲ್ಲವೆಂದು ಕೆಲ ಮೂಲಗಳು ಹೇಳುತ್ತಿವೆ.