ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಡಿ ವಿ ಸದಾನಂದಗೌಡರನ್ನು ಸಚಿವ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಭೇಟಿ ಮಾಡಿದ್ದಾರೆ. ಈ ಭೇಟಿ ಈಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯದಲ್ಲಾಗುತ್ತಿರೋ ಬೆಳವಣಿಗೆಗಳ ಬೆನ್ನೆಲ್ಲೇ ಮೂವರ ಭೇಟಿ ಸಂಚಲನ ಸೃಷ್ಟಿಸಿದೆ.
ಕೆಲವು ವರ್ಷಗಳಿಂದ ಜನಾರ್ಧನ ರೆಡ್ಡಿ ರಾಜ್ಯ ರಾಜಕೀಯದಿಂದ ದೂರವಿದ್ದರು. ಯಾವುದೇ ರಾಜಕೀಯ ಸಮಾರಂಭ ಹಾಗೂ ರಾಜಕೀಯ ಮುಖಂಡರ ಜೊತೆ ಕಾಣಿಸಿಕೊಂಡಿರಲಿಲ್ಲ. ಆದ್ರೀಗ ದಿಢೀರನೇ ಆಪ್ತ ಗೆಳೆಯ ಶ್ರೀರಾಮುಲು ಜೊತೆ ಜನಾರ್ಧನ ರೆಡ್ಡಿ ಮಾಜಿ ಕೇಂದ್ರ ಸಚಿವರನ್ನು ಭೇಟಿಯಾಗಿದ್ದು ಕುತೂಹಲ ಕೆರಳಿಸಿದೆ.
ಮೂಲಗಳ ಪ್ರಕಾರ, ಮುಂದಿನ ವಾರ ಬಿಜೆಪಿಯ ಕೆಲ ನಾಯಕರು ದೆಹಲಿ ಪ್ರವಾಸ ಮಾಡಲಿದ್ದಾರೆ. ಈ ವೇಳೆ ಮತ್ತೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಹೀಗಾಗಿ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಕೂಡ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಡಿವಿಎಸ್ ಜೊತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ, ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನಾಗಿ ಸದಾನಂದ ಗೌಡರನ್ನು ನೇಮಕ ಮಾಡಲು ಬಿಜೆಪಿ ಹೈ ಕಮಾಂಡ್ ನಿರ್ಧರಿಸಿದ್ದು, ಅದಕ್ಕಾಗೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದೆ ಎನ್ನಲಾಗಿದೆ. ಈ ಕಾರಣಕ್ಕೆ ಜುಲೈ 15ರಂದು ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಡಿವಿಎಸ್ರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.