ಕೊರೊನಾ ಇರಲಿ.. ಲಾಕ್ಡೌನ್ ಆಗಲಿ.. ಇದ್ಯಾವುದಕ್ಕೂ ಅಷ್ಟಾಗಿ ತಲೆ ಕೆಡಿಸಿಕೊಳ್ಳದ ಕನ್ನಡ ಚಿತ್ರರಂಗ ಹೊಸ ಸಿನಿಮಾಗಳ ಚಿತ್ರೀಕರಣಕ್ಕೆ ಮುಂದಾಗಿದೆ. ಕೆಜಿಎಫ್ ಸಿನಿಮಾ ನಿರ್ಮಿಸಿದ ಹೊಂಬಾಳೆ ಫಿಲಂಸ್ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ‘ದ್ವಿತ್ವ’ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದು, ಯೂಟರ್ನ್ ಪವನ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ. ಈಗ ಈ ತಂಡಕ್ಕೆ ದಕ್ಷಿಣ ಭಾರತದ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಸೇರ್ಪಡೆಯಾಗಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಪುನೀತ್ ಅಭಿಮಾನಿಗಳಲ್ಲಿ ಇನ್ನಿಲ್ಲದ ಸಂಭ್ರಮ ಮನೆಮಾಡಿದೆ.
ಅಂದ್ಹಾಗೆ, ತ್ರಿಶಾಗೆ ‘ದ್ವಿತ್ವ’ ಎರಡನೇ ಕನ್ನಡ ಸಿನಿಮಾ. 2014ರಲ್ಲಿ ತೆರೆಕಂಡಿದ್ದ ಪವರ್ ಚಿತ್ರದಲ್ಲಿ ಅಪ್ಪು ಜೊತೆ ತ್ರಿಶಾ ನಟಿಸಿದ್ದರು. ಈಗ ಸುಮಾರು ಏಳು ವರ್ಷಗಳ ಬಳಿಕ ಮತ್ತೆ ಪುನೀತ್ ರಾಜ್ಕುಮಾರ್ಗೆ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟಿದ್ದಾರೆ.
‘ದ್ವಿತ್ವ’ಗೆ ತ್ರಿಶಾ ಆಯ್ಕೆಯಾಗಿದ್ದು ಏಕೆ?
ತ್ರಿಶಾ ದಕ್ಷಿಣ ಭಾರತ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ತಮಿಳು, ತೆಲುಗು ಭಾಷೆಯ ಚಿತ್ರಗಳಲ್ಲೇ ಹೆಚ್ಚು ಕಾಣಿಸಿಕೊಂಡಿದ್ದರೂ, ಮಲಯಾಳಂ ಹಾಗೂ ಕನ್ನಡ ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇದು ದ್ವಿತ್ವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ಗೆ ದೊಡ್ಡ ಅಡ್ವಾಂಟೆಜ್. ‘ದ್ವಿತ್ವ’ವನ್ನು ಆರಾಮಾಗಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಮಾಡ್ಬಹುದು. ಇದೇ ಕಾರಣಕ್ಕೆ ಬಹುಭಾಷಾ ನಟಿಯನ್ನು ಆಯ್ಕೆ ಮಾಡಲಾಗಿದೆ ಎಂಬುದು ಗಾಂಧಿನಗರದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿದೆ.
ಇನ್ನು ನಿರ್ದೇಶಕ ಪವನ್ ಕುಮಾರ್ ಕೂಡ ತೆಲುಗು ಹಾಗೂ ತಮಿಳಿನಲ್ಲೂ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ‘ದ್ವಿತ್ವ’ವನ್ನು ತೆಲುಗು, ತಮಿಳಿನಲ್ಲಿ ಬಿಡುಗಡೆ ಮಾಡಿದ್ರೆ ಅಡ್ವಾಂಟೆಜ್ ಹೆಚ್ಚು. ಜೊತೆಗೆ ಮಲಯಾಳಂಗೆ ಡಬ್ ಆದ ಪುನೀತ್ ಸಿನಿಮಾಗಳು ಹೆಚ್ಚು ಜನಪ್ರಿಯವಾಗಿವೆ. ಈ ಎಲ್ಲಾ ಕಾರಣಕ್ಕೆ ತ್ರಿಶಾ ಕೃಷ್ಣನ್ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.