ಕೊರೊನಾ ಅದ್ಯಾವಾಗ ಯಾರಿಗೆ ವಕ್ಕರಿಸುತ್ತೋ ಗೊತ್ತಾಗ್ತಿಲ್ಲ. ಕರ್ನಾಟಕದಲ್ಲಿ ದಿನಕ್ಕೆ 50 ಸಾವಿರ ಕೊರೊನಾ ಸೋಂಕಿತರು ಪತ್ತೆಯಾಗ್ತಿದ್ದಾರೆ. ಕೇವಲ ಬೆಂಗಳೂರಿನಲ್ಲೇ ಪ್ರತಿನಿತ್ಯ ಹೆಚ್ಚು ಕಮ್ಮಿ 25 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗ್ತಿದೆ. ಕರ್ನಾಟಕದ ಪರಿಸ್ಥಿತಿಯಷ್ಟೇ ಉತ್ತರಪ್ರದೇಶದ ಸ್ಥಿತಿಯೂ ಭೀಕರವಾಗಿದೆ. ಮೀರತ್ನಲ್ಲಿರೋ ಸುರೇಶ್ ರೈನಾ ಕುಟುಂಬ ಕೂಡ ಕೊರೊನಾ ಸೋಂಕಿಗೆ ಸಿಕ್ಕು ಒದ್ದಾಡುತ್ತಿದ್ದು, ಸೋನು ಸೂದ್ ತಕ್ಷಣವೇ ರೈನಾ ನೆರವಿಗೆ ಬಂದಿದ್ದಾರೆ.
ಸುರೇಶ್ ರೈನಾ ಚಿಕ್ಕಮ್ಮನಿಗೆ ಇತ್ತೀಚೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರೋ ರೈನಾ ಚಿಕ್ಕಮ್ಮನಿಗೆ ಎಲ್ಲೂ ಆಕ್ಸಿಜನ್ ಸಿಲಿಂಡರ್ ಸಿಕ್ಕಿಲ್ಲ. ಹೀಗಾಗಿ ರೈನಾ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವ್ರಿಗೆ ಟ್ವೀಟ್ ಮೂಲಕ ಸಿಲಿಂಡರ್ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಹಾಯಕ್ಕೆ ಮುಂದಾಗಿರಲಿಲ್ಲ. ಅಷ್ಟರೊಳಗೆ ಸೋನು ಸೂದ್ ಮಿರತ್ನಲ್ಲಿರುವ 65 ವರ್ಷದ ಸುರೇಶ್ ರೈನಾ ಚಿಕ್ಕಮ್ಮನಿಗೆ ಆಕ್ಸಿಜನ್ ಸಿಲಿಂಡರ್ ತಲುಪಿಸಿದ್ದಾರೆ. ಇನ್ನು ‘ಹತ್ತು ನಿಮಿಷದಲ್ಲಿ ಆಕ್ಸಿಜನ್ ಸಿಲಿಂಡರ್ ತಲುಪಿದೆ ಭಾಯ್’ ಎಂದು ಟ್ವೀಟ್ ಮಾಡಿ ವಿಷಯ ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ತಲುಪಿಸಿದ ಸೋನು ಸೂದ್ಗೆ ಕ್ರಿಕೆಟರ್ ಸುರೇಶ್ ರೈನಾ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ‘ಸೋನು ಪಾಜಿ ನೀವು ಮಾಡಿದ ಅತೀ ದೊಡ್ಡ ಸಹಾಯಕ್ಕೆ ಧನ್ಯವಾದಗಳು’ ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಫೌಂಡೇಷನ್ ಕರ್ನಾಟಕದಲ್ಲೂ ಸಾಕಷ್ಟು ಆಸ್ಪತ್ರೆಗಳಿಗೆ ಸಹಾಯ ಹಸ್ತ ಚಾಚಿದ್ದಾರೆ. ಕೆಲ ದಿನಗಳ ಹಿಂದೆ ಆರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾದಾಗ ಸ್ವತ: ಸೋನು ಸೂದ್ ಫೌಂಡೇಷನ್ 15ಕ್ಕೂ ಹೆಚ್ಚು ಮಂದಿಯ ಜೀವ ಉಳಿಸಿದ್ದರು.