ಬಿಎಸ್ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ ಅನ್ನೋ ವದಂತಿ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಹೈಕಮಾಂಡ್ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಹೀಗಾಗಿ ಈಗಾಗ್ಲೆ ಕೈ ನಾಯಕರು ದೆಹಲಿ ತಲುಪಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಲಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಇಬ್ಬರು ನಾಯಕರಿಗೂ ಹೊಸ ಟಾಸ್ಕ್ ನೀಡುವ ಸಾಧ್ಯತೆಯಿದೆ. ಮುಖ್ಯಮಂತ್ರಿ ರೇಸ್ ಬಿಟ್ಟು ಪಕ್ಷ ಸಂಘಟನೆ ಮಾಡುವತ್ತ ಗಮನಹರಿಸಲು ಹೈಕಮಾಂಡ್ ಸೂಚನೆ ನೀಡಲಿದೆ ಎನ್ನಲಾಗಿದೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ರಾಜ್ಯದ ಕಾಂಗ್ರೆಸ್ ಬೆಳವಣಿಗೆಯ ಬಗ್ಗೆ ಎರಡು ಪ್ರತ್ಯೇಕ ವರದಿ ಸಿದ್ಧಪಡಿಸಿಕೊಂಡು ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಈ ವೇಳೆ ರಾಹುಲ್ ಗಾಂಧಿ, ಕೈ ಪಾಳೆಯದಲ್ಲಿರೋ ಮೂಲ ವರ್ಸಸ್ ವಲಸಿಗ ಕಾಂಗ್ರೆಸ್ ಸಮರಕ್ಕೆ ಕೊನೆ ಹಾಡಲಿದ್ದಾರೆಂದು ನಿರೀಕ್ಷೆ ಮಾಡಲಾಗಿದೆ.