‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಚಿತ್ರದಿಂದ ಕನ್ನಡ ಸಿನಿರಸಿಕರ ಮನಗೆದ್ದ ನಟಿ ಶ್ವೇತಾ ಶ್ರೀವಾಸ್ತವ್. ತಂದೆ ಎಲ್.ಕೃಷ್ಣಪ್ಪ ರಂಗಭೂಮಿಯಲ್ಲಿ ಗುರ್ತಿಸಿಕೊಂಡವರು.ಅವರ ಹಾದಿಯಲ್ಲೇ ಬಣ್ಣ ಹಚ್ಚಿದವರು ಶ್ವೇತಾ. ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚಿರೋ ಸಿಂಪಲ್ ನಟಿ ಚಿತ್ರರಂಗದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದಾರೆ. ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿಗೆ ಕೊಟ್ಟಿರುವ ಸಂದರ್ಶನದಲ್ಲಿ ಈ ಬಗ್ಗೆ ಮನ ಬಿಚ್ಚಿ ಮಾತನಾಡಿರುವ ಶ್ವೇತಾ, ಹಳೆಯದನ್ನೆಲ್ಲಾ ನೆನೆದು ಕಣ್ಣೀರು ಹಾಕಿದ್ದಾರೆ.
ಮಹಿಳೆಯರು ಇಂದಿನ ಪ್ರಪಂಚದಲ್ಲಿ ಮನೆಯಿಂದ ಹೊರ ಬರೋದೇ ಕಷ್ಟ. ಅಷ್ಟೆಲ್ಲ ಕಷ್ಟಗಳನ್ನು ಎದುರಿಸಿ, ಚಿತ್ರರಂಗಕ್ಕೆ ಬಂದ್ರೆ ನಮ್ಮನ್ನ ತುಚ್ಚವಾಗಿ ನೋಡ್ತಾರೆ. ನಮ್ಮ ಸುತ್ತಾ ಇರುವವರು ಬಹಳ ಅಣಕಿಸುತ್ತಾರೆ. ವಯಸ್ಸಾಗಿದೆ, ಮದುವೆ ಆಗಿದೆ, ಹಳೇ ಗುಜರಿ ಅಂತೆಲ್ಲಾ ಜೊತೆಗೆ ನಟಿಸಿದ ಹೀರೋಗಳೇ ವ್ಯಂಗ್ಯವಾಗಿ ಮಾತನಾಡುತ್ತಾರೆ ಅಂತ ನೋವನ್ನು ತೋಡಿಕೊಂಡಿದ್ದಾರೆ. ಅವತ್ತು ನನ್ನ ಬಗ್ಗೆ ಈ ರೀತಿ ಮಾತನಾಡಿದ ಹೀರೋಗಳನ್ನ ಈಗ ಮೆರೆಸುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರನ್ನು ಪ್ರೋತ್ಸಾಹಿಸೋದಿಲ್ಲ. ನೀವು ನಟಿಯಾಗೋದಕ್ಕೆ ಲಾಯಕ್ ಇಲ್ಲ, ಸಿನಿಮಾ ನಿರ್ದೇಶನ ಮಾಡಿ ಅಂದರು. ಆದರೆ ನಾನು ನಟಿಯಾಗಬೇಕು ಅಂತ ಬಂದವಳು, ನಾನೇಕೆ ಸಿನಿಮಾ ನಿರ್ದೇಶನ ಮಾಡಲಿ ಅಂತ ಶ್ವೇತಾ ಶ್ರೀವಾಸ್ತವ್ ಪ್ರಶ್ನಿಸಿದ್ದಾರೆ.
ಒಂದು ಚಿತ್ರದಲ್ಲಿ ನಾನು ಲೀಡ್ ರೋಲ್ ನಲ್ಲಿ ನಟಿಸಿದ್ದೆ. ಮತ್ತೊಬ್ಬ ನಟಿ ಕೆಲವೇ ದೃಶ್ಯಗಳಲ್ಲಿ ನಟಿಸಿದ್ದಳು. ಹೋದಲ್ಲಿ ಬಂದಲ್ಲಿ ಆಕೆಯನ್ನೇ ಹೆಚ್ಚು ಮೆರೆಸಿದರು. ಬರೀ ಚಿತ್ರರಂಗದಲ್ಲಿ ಮಾತ್ರವಲ್ಲ ಸಂಬಂಧಿಕರಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದೇನೆ. ಒಮ್ಮೆ ಸಂಬಂಧಿಕರ ಮನೆಯಲ್ಲಿ ಕಡಿಮೆ ಊಟ ಸಾಕು ಅಂದಿದ್ದಕ್ಕೆ ಏನ್ ದೊಡ್ಡ ಹೀರೋಯಿನ್ ಆಗ್ಬಿಡ್ತೀಯಾ, ಭಾರೀ ಡಯೆಟ್ ಮಾಡ್ತೀಯಾ, ಮಗು ಹೆರೋದನ್ನ ನೋಡು ಅಂತೆಲ್ಲಾ ಮಾತನಾಡಿದರಂತೆ. ಹೀಗೆ ಸಂದರ್ಶನದ ಉದ್ದಕ್ಕೂ ನಟಿಯಾಗಿ ತಾವು ಅನುಭವಿಸಿದ ನೋವನ್ನ ಶ್ವೇತಾ ತೋಡಿಕೊಂಡಿದ್ದಾರೆ. ಸದ್ಯ ‘ರಹದಾರಿ’ ಅನ್ನೋ ಚಿತ್ರದಲ್ಲಿ ಶ್ವೇತಾ ಶ್ರೀವಾಸ್ತವ್ ಬಣ್ಣ ಹಚ್ಚಿದ್ದಾರೆ.