ಚಂದನವನದ ದೊಡ್ಮನೆ ಕಲಾವಿದರೆಲ್ಲಾ ಒಳ್ಳೆ ಗಾಯಕರು ಅನ್ನೋದು ಗೊತ್ತೇಯಿದೆ. ಡಾ. ರಾಜ್ಕುಮಾರ್ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದವರು. ಅಣ್ಣಾವ್ರ ಮಕ್ಕಳಾದ ಶಿವರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸಾಕಷ್ಟು ಹಾಡುಗಳನ್ನ ಹಾಡಿದ್ದಾರೆ. ಇದೀಗ ಶಿವಣ್ಣ ‘ನ್ಯಾಯವೇ ದೇವರು’ ಚಿತ್ರದ ‘ಆಕಾಶವೇ ಬೀಳಲಿ ಮೇಲೆ’ ಹಾಡನ್ನ ಹಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿದೆ.
ತಮ್ಮ ಮನೆಯ ಲಾನ್ನಲ್ಲಿ ಮೊಬೈಲ್ ನೋಡುತ್ತಾ ಕರೋಕೆ ಕೇಳಿಸಿಕೊಳ್ಳುತ್ತ ಸೂಪರ್ ಹಿಟ್ ಗೀತೆಯನ್ನು ಶಿವರಾಜ್ಕುಮಾರ್ ಹಾಡಿದ್ದಾರೆ. ಆಪ್ತರೊಬ್ಬರು ಅದನ್ನ ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ. ಶಿವಣ್ಣನ ಗಾಯನಕ್ಕೆ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. 1971ರಲ್ಲಿ ಸಿದ್ಧಲಿಂಗಯ್ಯ ನಿರ್ದೇಶನದ ‘ನ್ಯಾಯವೇ ದೇವರು’ ಚಿತ್ರದಲ್ಲಿ ಡಾ. ರಾಜ್ಕುಮಾರ್ ಜೋಡಿಯಾಗಿ ಬಿ. ಸರೋಜಾ ದೇವಿ ಬಣ್ಣ ಹಚ್ಚಿದ್ದರು. ಚಿ. ಉದಯ್ ಶಂಕರ್ ಸಾಹಿತ್ಯ ಬರೆದಿದ್ದ ಹಾಡಿಗೆ ರಾಜನ್-ನಾಗೇಂದ್ರ ಸಂಗೀತ ನೀಡಿದ್ದರು.
ಹಲವು ವರ್ಷಗಳ ಕಾಲ ಅಣ್ಣಾವ್ರಿಗೆ ಶಾರೀರ ಆಗಿ ಹೋಗಿದ್ದ ಬಿ. ಬಿ ಶ್ರೀನಿವಾಸ್ ಈ ಹಾಡನ್ನು ಹಾಡಿದ್ದರು. 50 ವರ್ಷಗಳ ಹಿಂದೆ ಬಂದ ಈ ಬ್ಲ್ಯಾಕ್ ಅಂಡ್ ವೈಟ್ ಸಿನಿಮಾ ‘ನ್ಯಾಯವೇ ದೇವರು’ ಸೂಪರ್ ಹಿಟ್ ಆಗಿತ್ತು. ಶಿವಣ್ಣನ ಗಾಯನದಿಂದ ಕನ್ನಡ ಸಿನಿರಸಿಕರು ಎವರ್ಗ್ರೀನ್ ಸಾಂಗ್ನ ಮತ್ತೊಮ್ಮೆ ನೆನಪಿಸಿಕೊಳ್ಳುವಂತಾಗಿದೆ.