‘ನನ್ನ ಹೆಸರು ಆನಂದ್’ ಹೀಗಂತ ಡೈಲಾಗ್ ಹೇಳ್ತಾ ಕನ್ನಡ ಚಿತ್ರರಂಗಕ್ಕೆ ಬಂದ ನಟ ಶಿವರಾಜ್ ಕುಮಾರ್ ಸಿನಿಜರ್ನಿಗೆ ಈಗ 35 ವರ್ಷ. 1986 ಜೂನ್, 19ರಂದು ಶಿವಣ್ಣ ಅಭಿನಯದ ‘ಆನಂದ್’ ಸಿನಿಮಾ ಬಿಡುಗಡೆ ಆಗಿತ್ತು. ಅದೇ ವರ್ಷ ಫೆಬ್ರವರಿ 19ಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮುಹೂರ್ತ ನೆರವೇರಿಸಿಕೊಂಡಿದ್ದ ಸಿನಿಮಾ 4 ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿತ್ತು. ಸತತ 38 ವಾರಗಳ ಕಾಲ ಪ್ರದರ್ಶನ ಕಂಡು ದಾಖಲೆ ಬರೆದಿದ್ದು ಈಗ ಇತಿಹಾಸ. ದೊಡ್ಮನೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆನಂದ್ ಸಿನಿಮಾವನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ. ಶಿವಣ್ಣ ಹಾಗೂ ಸುಧಾರಾಣಿ ಇಬ್ಬರಿಗೂ ಇದು ಮೊದಲ ಸಿನಿಮಾ. ಇಬ್ಬರು ಬಾಲ ಕಲಾವಿದರಾಗಿ ನಟಿಸಿದ್ದರೂ, ನಾಯಕ- ನಾಯಕಿ ಆಗಿ ಇದು ಅವರ ಮೊದಲ ಚಿತ್ರವಾಗಿತ್ತು.
ನಟಸಾರ್ವಭೌಮ ಡಾ. ರಾಜ್ ಕುಮಾರ್ ಪುತ್ರ ನಾಯಕನಾಗಿ ಚಿತ್ರರಂಗಕ್ಕೆ ಬರ್ತಿದ್ದಾರೆ ಅಂದಾಗ ಪ್ರೇಕ್ಷಕರಲ್ಲಿ ಸಹಜವಾಗಿಯೇ ಕುತೂಹಲ ಇತ್ತು. ಮೊದಲ ಚಿತ್ರದಲ್ಲೇ ಅಣ್ಣಾವ್ರ ಮಗ ಅನ್ನೋದನ್ನ ಶಿವರಾಜ್ ಕುಮಾರ್ ಸಾಬೀತು ಮಾಡಿದ್ದರು. ಕಾಲೇಜು ಹುಡುಗನಾಗಿ ‘ಟುವ್ವಿ ಟುವ್ವಿ’ ಅಂತ ಹಾಡುತ್ತಾ ಬಂದ ಶಿವಣ್ಣ ಇವತ್ತಿಗೂ ಕನ್ನಡದ ನಂಬರ್ ವನ್ ನಾಯಕರ ಸಾಲಿನಲ್ಲಿದ್ದಾರೆ. ಅವರ ಎನರ್ಜಿ ಯುವ ನಟರನ್ನು ನಾಚಿಸುವಂತಿದೆ. ಆನಂದ್ ಸಿನಿಮಾ ಸಕ್ಸಸ್ ಆದಾಗ ಕೆಲವರು ಅಪ್ಪನ ಹೆಸರಿಂದ ಅಂತ ಹೇಳಿದ್ದರು. ಆದರೆ ಬ್ಯಾಕ್ ಟು ಬ್ಯಾಕ್ ರಥಸಪ್ತಮಿ, ಮನಮೆಚ್ಚಿದ ಹುಡುಗಿ ಸಿನಿಮಾಗಳು ಹಿಟ್ ಆಗಿ ಹ್ಯಾಟ್ರಿಕ್ ಹೀರೋ ಪಟ್ಟ ಅಲಂಕರಿಸಿದರು.
ಈ 35 ವರ್ಷಗಳಲ್ಲಿ ಶಿವರಾಜ್ ಕುಮಾರ್ ತರಹೇವಾರಿ ಪಾತ್ರಗಳನ್ನು ಮಾಡಿ ಗೆದ್ದಿದ್ದಾರೆ. ಆನಂದ್ ಚಿತ್ರದಲ್ಲಿ ನಟಿಸೋಕು ಮೊದಲು ಶಿವಣ್ಣ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಆ್ಯಕ್ಟಿಂಗ್ ಕಲಿತಿದ್ದರು. ಆ್ಯಕ್ಟಿಂಗ್ ಸ್ಕೂಲ್ ನಲ್ಲಿ ಅಣ್ಣಾವ್ರ ‘ಹಾಲುಜೇನು’ ಚಿತ್ರದ ಟೈಟಲ್ ಟ್ರ್ಯಾಕ್ ಕವರ್ ವರ್ಷನ್ ನಲ್ಲಿ ಕಾಣಿಸಿಕೊಂಡಿದ್ದ ವೀಡಿಯೋ ಇತ್ತೀಚಿಗೆ ವೈರಲ್ ಆಗಿತ್ತು. ಅಭಿನಯ ತರಬೇತಿ ಪಡೆದ ತಕ್ಷಣ ‘ಆನಂದ್’ ಸಿನಿಮಾದಲ್ಲಿ ನಟಿಸಿದ್ದರು. ಸಿಂಗೀತಂ ಶ್ರೀನಿವಾಸ್ ನಿರ್ದೇಶನದ ಚಿತ್ರವನ್ನು ಪಾರ್ವತಮ್ಮ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಶಂಕರ್ – ಗಣೇಶ್ ಸಂಗೀತ, ಚಿ. ಉದಯ್ ಶಂಕರ್ ಸಾಹಿತ್ಯದ ಚಿತ್ರದ ಎಲ್ಲಾ ಹಾಡುಗಳು ಹಿಟ್ ಆಗಿ ಸಿನಿಮಾ ಸಕ್ಸಸ್ ನಲ್ಲಿ ಪಾಲು ಪಡೆದಿತ್ತು.