ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಈ ನಡುವೆ ಚಿತ್ರಗಳ ಆಯ್ಕೆಯಲ್ಲಿ ಬಹಳ ಚ್ಯೂಸಿಯಾಗಿದ್ದಾರೆ. ವರ್ಷಕ್ಕೋ ಎರಡು ವರ್ಷಕ್ಕೋ ಒಂದು ಸಿನಿಮಾ ಮಾಡ್ತಾರೆ. ಆದ್ರೆ ಅಷ್ಟೂ ಸಮಯವನ್ನು ಸಂಪೂರ್ಣವಾಗಿ ಆ ಸಿನಿಮಾಗೇ ಮೀಸಲಿಡ್ತಾರೆ. ಈಗ ತಯಾರಾಗಿರುವ ಶಾರುಖ್ ರ ಹೊಸಾ ಸಿನಿಮಾ ‘ಪಠಾಣ್’. ಇದಕ್ಕಾಗಿ ಅವರು ಪಡೆದಿರುವ ಸಂಭಾವನೆ ಮೊತ್ತ ಬರೋಬ್ಬರಿ 100 ಕೋಟಿ ರೂಪಾಯಿಗಳು.
ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ‘ಪಠಾಣ್’ ರೂಪದಲ್ಲಿ ಕಾಣಿಸಿಕೊಳ್ತಿದ್ದಾರೆ ಶಾರುಖ್. ದೀಪಿಕಾ ಪಡುಕೋಣೆ ಈ ಚಿತ್ರದ ನಾಯಕಿ. ಹೃತಿಕ್ ರೋಶನ್, ಜಾನ್ ಅಬ್ರಹಾಂ ಮತ್ತು ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲೂ ಪಠಾಣ್ ಚಿತ್ರೀಕರಣ ಆಗಿದೆಯಂತೆ.
ಪಠಾಣ್ ಒಬ್ಬ ಗೂಢಾಚಾರನ ಕತೆಯ ಸುತ್ತಲೂ ಸುತ್ತುವ ಸಿನಿಮಾ. ಶಾರುಖ್ ಒಬ್ಬ ಅಂತಾರಾಷ್ಟ್ರೀಯ ಸ್ಪೈ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರದಲ್ಲಿ ಭರಪೂರ ಆಕ್ಷನ್ ಮತ್ತು ಸ್ಟಂಟ್ ಗಳಿವೆ. ಅನೇಕ ರಿಸ್ಕಿ ಸ್ಟಂಟ್ ಗಳನ್ನು ಖುದ್ದು ಶಾರುಖ್ ಮಾಡಿದ್ದಾರಂತೆ. ಸಾಕಷ್ಟು ಗ್ಯಾಪ್ ನಂತರ ಬರುತ್ತಿರುವ ಶಾರುಖ್ ಖಾನ್ ಚಿತ್ರ ಇದಾಗಿರೋದ್ರಿಂದ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲ ಹೆಚ್ಚಿದೆ.
ಆದ್ರೆ ಇದುವರಗೆ ಒಂದು ಸಿನಿಮಾಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಅಕ್ಷಯ್ ಕುಮಾರ್ ಎಂದೇ ನಂಬಲಾಗಿತ್ತು. ಆದ್ರೆ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವ ಮೂಲಕ ಶಾರುಖ್ ಖಾನ್ ಮತ್ತೆ ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದಾರೆ ಎಂದು ಮಾತನಾಡಿಕೊಳ್ತಿದೆ ಬಾಲಿವುಡ್.