ಸಂಚಾರಿ ವಿಜಯ್ ಹಠಾತ್ ನಿಧನದ ನೋವಿನಿಂದ ಸ್ಯಾಂಡಲ್ ವುಡ್ ಹೊರಬಂದಿಲ್ಲ. ವಿಭಿನ್ನ ಪಾತ್ರಗಳಿಂದ ಸಮಾಜ ಮುಖಿ ಕೆಲಸಗಳಿಂದ ಸಂಚಾರಿ ವಿಜಯ್ ಮನೆ ಮಾತಾಗಿದ್ದರು.’ನಾನು ಅವನ್ನಲ್ಲ ಅವಳು’ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದು ಕಡಿಮೆ ಸಾಧನೆ ಏನಲ್ಲ. ಅಂತಹ ಹತ್ತಾರು ಅದ್ಭುತ ಪಾತ್ರಗಳನ್ನು ಮಾಡಿ ಪ್ರಶಸ್ತಿ ಗೆಲ್ಲಬೇಕಿದ್ದ ವಿಜಯ್, ಬೈಕ್ ಅಪಘಾತದಲ್ಲಿ ಕೊನೆಯುಸಿರೆಳೆದರು. ವಿಜಯ್ ನಿಧನದ ನಂತರ ಅವರ ಅಂಗಾಂಗಗಳನ್ನು ದಾನ ಮಾಡಿ ಅವರ ಕುಟುಂಬ ಸದಸ್ಯರು ಮಾದರಿ ಆಗಿದ್ದಾರೆ. ಸಂಚಾರಿ ವಿಜಯ್ ಅಭಿನಯದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಿದ್ದ ಕಾಮೆಂಟ್ ಈಗ ವೈರಲ್ ಆಗ್ತಿದೆ.
ಪ್ರಜ್ವಲ್ ದೇವರಾಜ್ ಅಭಿನಯದ ‘ಜಂಟಲ್ ಮನ್’ ಚಿತ್ರದಲ್ಲಿ ಸಂಚಾರಿ ವಿಜಯ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದರು. ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಅತಿಥಿ ಆಗಿ ಆಗಮಿಸಿದ್ದ ನಟ ದರ್ಶನ್ ಕನ್ನಡ ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಆ ಭಾಷೆಯಲ್ಲಿ ಆ ಸಿನಿಮಾ ಚೆನ್ನಾಗಿದೆ ಈ ಸಿನಿಮಾ ಚೆನ್ನಾಗಿದೆ ಅನ್ನೋದಲ್ಲ, ನಮ್ಮ ಸಿನಿಮಾಗಳನ್ನ ಮೊದಲು ನೋಡಿ ಅಂತ ಖಾರವಾಗಿಯೇ ಹೇಳಿದ್ದರು. ಇದೇ ವೇಳೆ ದರ್ಶನ್ “ಬೇರೆ ಭಾಷೆಯಲ್ಲಿ ಒಬ್ಬ ನಟ ಇದ್ದಾರೆ ಅವರ ಹೆಸರು ಬೇಡ, ಅವರಿಗಿಂತ ಸಂಚಾರಿ ವಿಜಯ್ ಅದ್ಭುತ ನಟ” ಅಂತ ಹಾಡಿ ಹೊಗಳಿದ್ದರು. ಈ ಮಾತು, ಹೇಳಿದ್ದು ವಿಜಯ್ ಸೇತುಪತಿಗೆ ಅಂತ ಅಭಿಮಾನಿಗಳು ಅಂದ್ಕೊಂಡಿದ್ದರು. ಆಗ ವಿಜಯ್ ಸೇತುಪತಿ ಸೂಪರ್ ಡಿಲಕ್ಸ್ ಅನ್ನೋ ಚಿತ್ರದಲ್ಲಿ ತೃತಿಯ ಲಿಂಗಿ ಅವತಾರದಲ್ಲಿ ನಟಿಸಿದ್ದರು. ದರ್ಶನ್ ಅವರ ಮಾತು ಕೇಳಿ ಸಂಚಾರಿ ವಿಜಯ್ ಕೂಡ ಥ್ರಿಲ್ಲಾಗಿದ್ದರು. ಇಂತಹ ಪ್ರತಿಭೆಗೆ ಯಾಕೋ ಕನ್ನಡದಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಅವಕಾಶಗಳು ಸಿಗಲಿಲ್ಲ. ದರ್ಶನ್ ಅವತ್ತು ಹೇಳಿದ ಮಾತುಗಳು ಆ ವೀಡಿಯೋ ಸಂಚಾರಿ ವಿಜಯ್ ನಿಧನದ ನಂತರ ವೈರಲ್ ಆಗುತ್ತಿದೆ.
ಆ್ಯಕ್ಟ್ 1978 ಚಿತ್ರದಲ್ಲಿ ಸಂಚಾರಿ ವಿಜಯ್ ಪಾತ್ರವೊಂದನ್ನ ಮಾಡಿದ್ದರು. ಚಿತ್ರಮಂದಿರಗಳಲ್ಲಿ 50% ಆಕ್ಯುಪೆನ್ಸಿ ನಡುವೆ ಸಿನಿಮಾ ರಿಲೀಸ್ ಆಗಿತ್ತು. ನಟ ದರ್ಶನ್ ಕೂಡ ಎಲ್ಲರೂ ಚಿತ್ರವನ್ನ ನೋಡಿ ಗೆಲ್ಲಿಸಬೇಕು ಅಂತ ಮನವಿ ಮಾಡಿದ್ದರು. ಸಂಚಾರಿ ವಿಜಯ್ ಸೇರಿದಂತೆ ಇಡೀ ಚಿತ್ರತಂಡವನ್ನು ಮನೆಗೆ ಕರೆದು, ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಆಗ ಸಂಚಾರಿ ವಿಜಯ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದರು.