ಎಲ್ಲಿ ನೋಡಿದ್ರೂ ಕೊರೊನಾ.. ಕೊರೊನಾ.. ಕೊರೊನಾ.. ಎರಡನೇ ಅಲೆಯ ದಾಳಿಗೆ ಕೇವಲ ಬೆಂಗಳೂರು, ಕರ್ನಾಟಕ ಅಷ್ಟೇ ಅಲ್ಲ. ಇದೇ ಭಾರತವೇ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ರಾಜಮೌಳಿ ಮತ್ತು RRR ಚಿತ್ರತಂಡ ಜನರಲ್ಲಿ ಜಾಗೃತಿ ಮೂಡಿಸೋಕೆ ಮುಂದಾಗಿದೆ. ಈ ವೇಳೆ ಜೂ.ಎನ್ಟಿಆರ್ ಕನ್ನಡದಲ್ಲೇ ಮಾತಾಡಿ ಕನ್ನಡಿಗರಿಗೆ ಜಾಗೃತರಾಗಿರುವಂತೆ ಕೇಳಿಕೊಂಡಿದ್ದಾರೆ.
ಜೂ.ಎನ್ಟಿಆರ್ ಜೊತೆ ಆಲಿಯಾಭಟ್, ಅಜಯ್ ದೇವಗನ್, ರಾಮ್ಚರಣ್ ತೇಜಾ, ರಾಜಮೌಳಿ ಕೂಡ ಬೇರೆ ಬೇರೆ ಭಾಷೆಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಅಜಯ್ ದೇವಗನ್ ಹಿಂದಿಯಲ್ಲಿ, ರಾಮ್ ಚರಣ್ ತಮಿಳಿನಲ್ಲಿ, ರಾಜಮೌಳಿ ಮಲಯಾಳಂನಲ್ಲಿ ಕೊವಿಡ್ ವಿರುದ್ಧದ ಹೋರಾಟಕ್ಕೆ ಕರೆ ನೀಡಿದ್ದಾರೆ.
‘ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕುಗಳು, ಸ್ಯಾನಿಟೈಸರ್ಗಳು ದೊಡ್ಡ ಅಸ್ತ್ರಗಳಾಗಿವೆ. ಮಾಸ್ಕ್ ಅನ್ನು ಸದಾ ಧರಿಸಿ, ಕೈಗಳನ್ನು ಸದಾ ಸ್ವಚ್ಛಗೊಳಿಸಿ ಮತ್ತು ನೀವು ಹೊರಗೆ ಓಡಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ’ ಎಂದು ಜೂ.ಎನ್ಟಿಆರ್ ಸಂದೇಶ ನೀಡಿದ್ದಾರೆ.
ಜೂ.ಎನ್ಟಿಆರ್ಗೂ ಕನ್ನಡಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಜೂ.ಎನ್ಟಿಆರ್ ಅಮ್ಮ ಮಡಿಕೇರಿಯವರು ಹೀಗಾಗಿ ಕನ್ನಡದ ಬಗ್ಗೆ ತೆಲುಗು ನಟನಿಗೆ ಎಲ್ಲಿಲ್ಲದ ಒಲವು. ಅಲ್ಲದೇ ಈ ಹಿಂದೆ ಪುನೀತ್ ರಾಜ್ಕುಮಾರ್ ನಟನೆಯ ಚಕ್ರವ್ಯೂಹ ಸಿನಿಮಾಕ್ಕೆ ಗೆಳೆಯ ಗೆಳೆಯಾ ಎಂದು ಹಾಡಿದ್ದರು.