ವಿಶ್ವವಿಖ್ಯಾತ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡ್ಬೇಕು ಅನ್ನೋದು ಶಂಕರ್ನಾಗ್ ಕನಸಾಗಿತ್ತು. ಸ್ವತ: ಖರ್ಚಿನಲ್ಲಿ ಓಡಾಡಿ ರೋಪ್ ವೇ ನಿರ್ಮಿಸಲು ರೂಪು-ರೇಷೆಗಳನ್ನು ಸಿದ್ಧಪಡಿಸಿದ್ದರೂ ಅಂದಿನ ಸರ್ಕಾರ ಆ ಯೋಜನೆಯನ್ನು ಕೈಗೆತ್ತಿಗೊಂಡಿರಲಿಲ್ಲ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರೋಪ್ ವೇ ಯೋಜನೆ ಮತ್ತೆ ಜೀವ ಪಡೆದುಗೊಳ್ಳುತ್ತಿದೆ.
ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಇದೇ ಜುಲೈ 23ರಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಇತ್ತೀಚೆಗೆ ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾಗಿರೋ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ತೆಗೆದುಗೊಳ್ಳಲಾಗಿದೆ.
ನೆನೆಗುದಿಗೆ ಬಿದ್ದಿರುವ ನಂದಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿಗೆ ಚಾಲನೆ ನೀಡಬೇಕೆಂದು ಸಚಿವ ಯೋಗೇಶ್ವರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ರೋಪ್ ವೇ ನಿರ್ಮಾಣ ಸಂಸ್ಥೆ AARCON INFRA ನಂದಿ ಬೆಟ್ಟ ಯೋಜನೆಯ ಪ್ರಾತ್ಯಕ್ಷಿತೆ ಪ್ರದರ್ಶಿಸಿದೆ. ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದೆ. ದೇಶ-ವಿದೇಶಗಳಲ್ಲಿ 64 ರೋಪ್ ವೇ ಗಳನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ರಾಜ್ಯದ ಪ್ರಪ್ರಥಮ ರೋಪ್ ವೇ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಪಿ ಯೋಗೇಶ್ವರ್ ಸಭೆಯಲ್ಲಿ ಸೂಚಿಸಿದ್ದಾರೆ.