ರಾಜ್ಯದ ಉದ್ದಗಲಕ್ಕೂ ಕಳೆದ 8 ದಿನಗಳಿಂದ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಸರ್ಕಾರ ಮತ್ತು ಸಾರಿಗೆ ನೌಕರರ ನಡುವಿನ ಹಗ್ಗಜಗ್ಗಾಟ ಇನ್ನೂ ಮುಂದುವರೆದಿದೆ. ಸರ್ಕಾರ ಬೇಡಿಕೆ ಈಡೇರಿಸುವ ತನಕ ಪ್ರತಿಭಟನೆ ಮುಂದುವರೆಸಿಕೊಂಡು ಹೋಗಲು ನೌಕರರು ನಿರ್ಧರಿಸಿದ್ದಾರೆ. ಪ್ರತಿದಿನ ವಿಭಿನ್ನವಾಗಿ ಪ್ರತಿಭಟನೆ ಮಾಡಿ ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡ್ತಿದ್ದಾರೆ. ಸಾರಿಗೆ ನೌಕರರು ಇಂದು ಒಂದು ಹೆಜ್ಜೆ ಮುಂದಕ್ಕೆ ಹೋಗಿ ತಮ್ಮ ಹೋರಾಟಕ್ಕೆ ಕೈಜೋಡಿಸಲು ರಾಕಿಂಗ್ ಸ್ಟಾರ್ ಯಶ್ಗೆ ಮನವಿ ಮಾಡಿದರು.
ಕೆಜಿಎಫ್ನ ರಾಕಿ ಭಾಯ್ ಯಶ್ರ ತಂದೆ ಬಿಎಂಟಿಸಿಯಲ್ಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ರು. ಹಾಗಾಗಿ ತಮ್ಮ ಕಷ್ಟ ನಿಮಗೆ ತಿಳಿದಿರುತ್ತದೆ ಎಂದು ಆರಂಭಿಸಿ ತಮ್ಮ ಹೋರಾಟಕ್ಕೆ ಬೆಂಬಲ ಕೊಡಿ ಎಂದು ಸಾರಿಗೆ ಸಂಸ್ಥೆ ನೌಕರರು ಯಶ್ಗೆ ಬಹಿರಂಗ ಪತ್ರ ಬರೆದಿದ್ದರು. ಈ ಪತ್ರವನ್ನು ಗಮನಿಸಿದ ಯಶ್ ಏನು ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಅಂದ್ಹಾಗೆ ಸಾರಿಗೆ ನೌಕರರ ಒಕ್ಕೂಟ ಯಶ್ಗೆ ಬರೆದಿದ್ದ ಪತ್ರ ಇಲ್ಲಿದೆ.


ಈ ವಿಚಾರವಾಗಿ ಯಶ್ ಬಹಳ ತುರ್ತಾಗಿ ಪ್ರತಿಕ್ರಿಯಿಸಿದ್ದಾರೆ. ತಮಗೆ ಪತ್ರ ಬರೆದ ಸಾರಿಗೆ ನೌಕರರ ಒಕ್ಕೂಟಕ್ಕೆ ಯಶ್ ಕೂಡಾ ಒಂದು ಉತ್ತರದ ಪತ್ರ ಬರೆದಿದ್ದಾರೆ. ತಮ್ಮ ತಂದೆಯ ಬದುಕಿನ ಕೆಲವು ಪುಟಗಳ ಪರಿಚಯವನ್ನೂ ಆ ಪತ್ರದಲ್ಲಿ ನಮೂದಿಸಿದ್ದಾರೆ. ಅದರಂತೆಯೇ ಉಳಿದೆಲ್ಲಾ ನೌಕರರ ಬದುಕು, ಬವಣೆ ತನಗೆ ಅರ್ಥವಾಗುತ್ತದೆ ಎಂದಿದ್ದಾರೆ ಯಶ್. ಇಂದು ನಾನು ಏನೇ ಆಗಿದ್ದರೂ ಮೊದಲು ನಿಮ್ಮ ಸಂಸ್ಥೆಯ ಪ್ರಾಮಾಣಿಕ ನೌಕರನ ಪುತ್ರ ಎಂದು ತನ್ನ ತಂದೆಯ ಕುರಿತು ಹೆಮ್ಮೆಯಿಂದಲೇ ಪತ್ರದಲ್ಲಿ ಬರೆದಿದ್ದಾರೆ. ಸಾರಿಗೆ ನೌಕರರ ಸಮಸ್ಯೆಯ ಕುರಿತು ತಾನು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಬಳಿ ಚರ್ಚಿಸಿದ್ದು ಸಮಸ್ಯೆ ಪರಿಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಅವರು ಮಾಡುತ್ತಿದ್ದಾರೆ. ಮುಕ್ತ ಮನಸ್ಸುಗಳ ಬಿಚ್ಚು ಮಾತು ಪರಿಹಾರ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಯಶ್. ಅವರು ಬರೆದಿರುವ ಪತ್ರ ಇಲ್ಲಿದೆ:
ಯಶ್ ಬರೆದಿರುವ ಪತ್ರಕ್ಕೆ ಸಾರಿಗೆ ನೌಕರರ ಒಕ್ಕೂಟ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಸ್ಯೆಗೆ ಸಮಾಧಾನ ತಂದುಕೊಳ್ಳುವ ಅವರ ಅನಿಸಿಕೆಯ ಕುರಿತು ಪ್ರತಿಭಟನಾಕಾರರ ಅಭಿಪ್ರಾಯ ಏನು ಎನ್ನುವುದರ ಕುರಿತು ಕುತೂಹಲವಂತೂ ಇದ್ದೇ ಇದೆ.