ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಎಲ್ಲೆಡೆ ಭರ್ಜರಿಯಾಗಿ ಓಡ್ತಿದೆ. ಚಿತ್ರದ ನಿರ್ಮಾಪಕ ಉಮಾಪತಿಯಂತೂ ಯಶಸ್ಸಿನ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇದೇ ಜೋಶ್ ನಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ನಿರ್ದೇಶಕ ಮಹೇಶ್ ಗೆ ಭರ್ಜರಿ ಉಡುಗೊರೆ ನೀಡಿದ್ದಾರೆ ನಿರ್ಮಾಪಕ ಉಮಾಪತಿ.
ಡೈರೆಕ್ಟರ್ ಮಹೇಶ್ ಮದಗಜ ನಿರ್ದೇಶನ ಮಾಡುತ್ತಿರುವುದು ಹೌದಾದ್ರೂ ರಾಬರ್ಟ್ ಚಿತ್ರದ ಅನೇಕ ಕೆಲಸಗಳಲ್ಲಿ ನಿರ್ಮಾಪಕ ಉಮಾಪತಿಗೆ ಬೆಂಬಲವಾಗಿ ನಿಂತಿದ್ರು. ಹಾಗಾಗಿ ಚಿತ್ರದ ಯಶಸ್ಸಿಗೆ ಮಹೇಶ್ ಶ್ರಮವೂ ಕಾರಣ ಎಂದು ನಿರ್ಧರಿಸಿದ ಉಮಾಪತಿ ಕಾರ್ ಗಿಫ್ಟ್ ಮಾಡಿದ್ದಾರೆ. ಇದರಿಂದ ಮಹೇಶ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ನಿರ್ದೇಶಕ ಮಹೇಶ್ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ”ನನಗೆ ಉಮಾಪತಿ ಅವರಿಂದ ಸಿಕ್ಕ ಸರ್ಪ್ರೈಸ್ ಕಾರು” ಎಂದು ಖುಷಿಯಾಗಿದ್ದಾರೆ. ಕೆಂಪು ಬಣ್ಣದ ಹುಂಡೈ ಕಾರಿನ ಎದುರು ಮಹೇಶ್ ಮತ್ತು ಉಮಾಪತಿ ನಿಂತಿರುವ ಚಿತ್ರವನ್ನು ಶೇರ್ ಮಾಡಿಕೊಂಡಿದ್ದಾರೆ.
‘ಮದಗಜ’ ಚಿತ್ರಕ್ಕೂ ಉಮಾಪತಿ ನಿರ್ಮಾಪಕರು. ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಶ್ರೀಮುರಳಿ, ಆಶಿಕಾ ರಂಗನಾಥ್, ಜಗಪತಿ ಬಾಬು ಮುಖ್ಯಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ತೆರೆಗೆ ಅಪ್ಪಳಿಸೋಕೆ ಮದಗಜ ಕಾಯುತ್ತಿದ್ದಾನೆ.
ಇನ್ನು ಮೊದಲ ವಾರಕ್ಕೆ ರಾಬರ್ಟ್ ಸಿನಿಮಾ 78 ಕೋಟಿ ಗಳಿಸಿತ್ತು. ಮುಂದಿನ ವಾರದಿಂದ ರಾಜ್ಯಾದ್ಯಂತ ರಾಬರ್ಟ್ ಚಿತ್ರತಂಡ ವಿಜಯಯಾತ್ರೆ ಪ್ರಾರಂಭಿಸುತ್ತಿದ್ದಾರೆ. ತರುಣ್ ಸುಧೀರ್ ಈ ಚಿತ್ರ ನಿರ್ದೇಶಿಸಿದ್ದು, ಆಶಾ ಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು ನಟಿಸಿದ್ದಾರೆ.