ಅದೃಷ್ಟ ಅನ್ನಿ, ಫ್ಲೂಕ್ ಅನ್ನಿ ಏನಾದರೂ ಹೇಳಿ ರಶ್ಮಿಕಾ ಸಕ್ಸಸ್ ಮಾತ್ರ ಎಂತಹವರಿಗೂ ಅಚ್ಚರಿ ಹುಟ್ಟಿಸುವಂಥದ್ದು. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಯಾವುದೇ ನಟಿ ಕೊಡಗಿನ ಕುವರಿ ರೇಂಜಿಗೆ ಪರ ಭಾಷಾ ಸಿನಿಮಾಗಳಲ್ಲಿ ಸದ್ದು ಗದ್ದಲ ಮಾಡ್ಲಿಲ್ಲ. ಕಿರಿಕ್ ಪಾರ್ಟಿ ಚಿತ್ರದಿಂದ ಶುರುವಾದ ಸಾನ್ವಿ ಸಕ್ಸಸ್ ಫುಲ್ ಜರ್ನಿ ಬಿಗ್ ಬಿ ಅಮಿತಾಬ್ ಜೊತೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಮಟ್ಟಿಗೆ ಮುಂದುವರೆದಿದೆ. ತೆಲುಗಿನ ‘ಗೀತಾಗೋವಿಂದಂ’ ಚಿತ್ರದ ಸಕ್ಸಸ್ ಕೊಡಗಿನ ಹುಡುಗಿಯನ್ನ ಎಲ್ಲಿಂದ ಎಲ್ಲಿಗೋ ಕರೆದುಕೊಂಡು ಹೋಗಿದೆ. ರಶ್ಮಿಕಾ ಈಗ ಮತ್ತೊಂದು ಹೆಜ್ಜೆ ಮೇಲಕ್ಕೇರಿದ್ದಾರೆ.
ಕನ್ನಡ, ತೆಲುಗು, ತಮಿಳು ನಂತರ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಿಷನ್ ಮಜ್ನು, ಗುಡ್ ಬೈ ಅನ್ನೋ ಎರಡು ಬಾಲಿವುಡ್ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರಲ್ಲಿ ಒಂದು ಬಿಗ್ ಬಿ ಜೊತೆ ನಟಿಸುತ್ತಿರೋ ಸಿನಿಮಾ. ಸದ್ಯ ಶೂಟಿಂಗ್ ಗಾಗಿ ಮುಂಬೈನಲ್ಲೇ ಸಾನ್ವಿ ಬೀಡು ಬಿಟ್ಟಿದ್ದಾರೆ. ಹೊಸ ಸಮಾಚಾರ ಏನಪ್ಪಾ ಅಂದ್ರೆ, ಮುಂಬೈ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಖರೀದಿಸಿ, ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ಕನ್ನಡ ನಟಿಯರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸೋದೇ ಕಷ್ಟ. ಅಂತಹದರಲ್ಲಿ ಅಲ್ಲೇ ಮನೆ ಖರೀದಿಸಿ, ವಾಸ್ತವ್ಯ ಹೂಡುವುದು ತಮಾಷೆ ಮಾತಲ್ಲ.
ಕೆಲ ದಿನಗಳ ಹಿಂದೆ ರಕ್ಷಿತ್ ಶೆಟ್ಟಿ ಹೇಳಿದ ಮಾತುಗಳು ನಿಜವಾಗುತ್ತಿದೆ. ರಶ್ಮಿಕಾ ಹುಟ್ಟುಹಬ್ಬಕ್ಕೆ ಕಿರಿಕ್ ಪಾರ್ಟಿ ಚಿತ್ರದ ಆಡಿಷನ್ ವೀಡಿಯೋ ಶೇರ್ ಮಾಡಿ “ಕಿರಿಕ್ ಪಾರ್ಟಿ ಚಿತ್ರದ ಆಡಿಷನ್ನಿಂದ ಈ ಬ್ಯೂಟಿಫುಲ್ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಅಲ್ಲಿಂದ ನೀನು ತುಂಬ ದೂರದವರೆಗೆ ಪ್ರಯಾಣ ಮಾಡಿದ್ದೀಯಾ… ನಿಜವಾದ ಯೋಧನ ರೀತಿಯಲ್ಲಿ ನೀನು ಕಂಡ ಕನಸುಗಳ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಹುಡುಗಿ… ಹುಟ್ಟುಹಬ್ಬದ ಶುಭಾಶಯಗಳು”. ರಕ್ಷಿತ್ ಶೆಟ್ಟಿ ಹೇಳಿದಂತೆ ರಶ್ಮಿಕಾ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇದ್ದಾರೆ.