ಅಭಿಮಾನ ಅನ್ನೋದೇ ಹಾಗೆ. ಏನೇನೋ ಮಾಡಿಸಿಬಿಡುತ್ತೆ. ಮೊನ್ ಮೊನ್ನೆ ಸೋನುಸೂದ್ ಅಭಿಮಾನಿಯೊಬ್ಬ ಹೈದ್ರಾಬಾದ್ನಿಂದ ಮುಂಬೈಗೆ ಕಾಲ್ನಡಿಗೆಯಲ್ಲಿ ತೆರಳಿ ನೆಚ್ಚಿನ ನಟನನ್ನು ಭೇಟಿ ಮಾಡಿದ್ದ. ಆತ ಮನೆಯಿಂದ ಹೊರಟಾಗಲೇ ವಿಷಯ ತಿಳಿದ ಸೋನು, ತಾವೇ ವಾಹನದ ವ್ಯವಸ್ಥೆ ಮಾಡೋದಾಗಿ ಹೇಳಿದರೂ ಆತ ಕೇಳಲಿಲ್ಲ. ಕೊನೆಗೂ ನೂರಾರು ಕಿಲೋ ಮೀಟರ್ ನಡೆದು ಕೊರೊನಾ ಸಂಕಷ್ಟದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡುತ್ತಿರುವ ಬಾಲಿವುಡ್ ನಟನಿಗೆ ಧನ್ಯವಾದ ತಿಳಿಸಿದ್ದ. ಇದೀಗ ರಶ್ಮಿಕಾ ಮಂದಣ್ಣನ ನೋಡೋಕೆ ವ್ಯಕ್ತಿಯೊಬ್ಬ ತೆಲಂಗಾಣದಿಂದ ಕರ್ನಾಟಕದ ವಿರಾಜಪೇಟೆಯ ಮಗ್ಗುಲಹಳ್ಳಿಗೆ ಬಂದಿದ್ದಾನೆ. ಆತನ ಹುಚ್ಚಾಟಕ್ಕೆ ಪೊಲೀಸರು ಸರಿಯಾಗಿ ಪಾಠ ಹೇಳಿದ್ದಾರೆ.
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಸ್ಯಾಂಡಲ್ವುಡ್ ಬಿಟ್ಟು ಟಾಲಿವುಡ್, ಬಾಲಿವುಡ್ನಲ್ಲಿ ಕಮಾಲ್ ಮಾಡ್ತಿದ್ದಾರೆ. ನ್ಯಾಷನಲ್ ಕ್ರಶ್ ಅನ್ನೋ ಪಟ್ಟ ಅಲಂಕರಿಸಿಬಿಟ್ಟಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸ್ತಿದ್ದಾರೆ. ಸಾನ್ವಿಗೆ ದೊಡ್ಡ ಅಭಿಮಾನಿ ಬಳಗವಿದೆ. ತೆಲಂಗಾಣದ ಆಕಾಶ್ ತ್ರಿಪಾಠಿಗೆ ರಶ್ಮಿಕಾ ಮಂದಣ್ಣ ಅಂದರೆ ಹುಟ್ಟು ಅಭಿಮಾನ. ಆಕೆಯನ್ನ ನೋಡಬೇಕು ಅಂತ ಸೀದಾ ರಶ್ಮಿಕಾ ಹುಟ್ಟೂರಿಗೆ ಹೋಗಿದ್ದಾನೆ.
ತೆಲಂಗಾಣದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸಿ, ಅಲ್ಲಿಂದ ವಿರಾಜಪೇಟೆಗೆ ಗೂಡ್ಸ್ ಆಟೋದಲ್ಲಿ ತೆರಳಿ ನೆಚ್ಚಿನ ನಟಿಯ ಮನೆಗಾಗಿ ಹುಡುಕಾಟ ನಡೆಸಿದ್ದಾನೆ. ಮನೆ ಸಿಗದಿದ್ದಾಗ ಪ್ರತಿಭಟನೆಗೆ ಮುಂದಾಗಿದ್ದಾನೆ. ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಆಕಾಶ್ ತ್ರಿಪಾಠಿಯ ಹಿನ್ನಲೆ ವಿಚಾರಿಸಿ, ಆತ ಬಂದ ಕಾರಣ ತಿಳಿದು, ಇನ್ನು ಮುಂದೆ ಹೀಗೆ ಮಾಡದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.