IAS ಅಧಿಕಾರಿ ರೋಹಿಣಿ ಸಿಂಧೂರಿ ಕೇವಲ ಕರ್ನಾಟಕ ಅಷ್ಟೇ ಅಲ್ಲ. ದಕ್ಷಿಣ ಭಾರತದಲ್ಲಿ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ ರೋಹಿಣಿ ಸಿಂಧೂರಿ ಹಾಗೂ ಶಿಲ್ಪನಾಗ್ ನಡುವಿನ ಜಟಾಪಟಿ ಭಾರೀ ಚರ್ಚೆಯಲ್ಲಿದ್ದು, ಮೈಸೂರಿನಿಂದ ವರ್ಗಾವಣೆಗೊಂಡಿರೋ ಸಿಂಧೂರಿ ಅವರ ಸಾಧನೆ ಆಧಾರಿತ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಮಧ್ಯೆ ಮೋಹಕತಾರೆ ರಮ್ಯಾ ಕೂಡ ರೋಹಿಣಿ ಪರವಾಗಿ ಬ್ಯಾಟ್ ಬೀಸಿದ್ದು ಸಿನಿಮಾ ಅಭಿಮಾನಿಗಳಲ್ಲಿ ಚರ್ಚೆಗೀಡು ಮಾಡಿದೆ.
ಕೆಲವು ದಿನಗಳ ಹಿಂದೆ ಸಿನಿಮಾ ಹಾಗೂ ರಾಜಕೀಯ ಎರಡೂ ಮುಗಿದ ಅಧ್ಯಾಯವೆಂದು ರಮ್ಯಾ ಸುದ್ದಿಯಲ್ಲಿದ್ದರು. ಈಗ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಬ್ಯಾಟ್ ಬೀಸಿ ಚರ್ಚೆಯಲ್ಲಿದ್ದಾರೆ. ‘‘ ರೋಹಿಣಿ ಸಿಂಧೂರಿಯವರ ಕಾರ್ಯವೈಖರಿಯನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ಈಗಲೂ ಮೆಚ್ಚಿಕೊಳ್ಳುತ್ತೇನೆ. ಇಂದಿನ ರಾಜಕೀಯ, ಪ್ರಾಮಾಣಿಕವಾಗಿ ಕೆಲಸ ಮಾಡ್ತಿರೋ ಅಧಿಕಾರಿಗಳಿಗೆ ಪ್ರೋತ್ಸಾಹ ನೀಡುತ್ತಿಲ್ಲ ಮತ್ತು ಬೆಂಬಲಿಸುತ್ತಿಲ್ಲ’’ ಎಂದು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇದೇ ಪೋಸ್ಟ್ನಲ್ಲಿ ರೋಹಿಣಿ ಸಿಂಧೂರಿ ಖಾಸಗಿ ಚಾನಲ್ನೊಂದಿಗೆ ಮಾತಾಡಿರೋ ತುಣುಕನ್ನೂ ಶೇರ್ ಮಾಡಿದ್ದಾರೆ.
Ramya Instagram Link: https://www.instagram.com/stories/divyaspandana/2591416624907539356/
ಇದೇ ವೇಳೆ ರೋಹಿಣಿ ಸಿಂಧೂರಿ ಕಾರ್ಯವೈಖರಿಯನ್ನಾಧರಿಸಿದ ಸಿನಿಮಾ ಕೂಡ ಸೆಟ್ಟೇರಲು ಸಿದ್ಧವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಲಿದೆ. ಈಗಾಗ್ಲೇ ಟೈಟಲ್ ಕೂಡ ಫಿಕ್ಸ್ ಆಗಿದ್ದು ‘ಭಾರತ ಸಿಂಧೂರಿ’ ಅನ್ನೋ ಶೀರ್ಷಿಕೆ ಫಿಕ್ಸ್ ಆಗಿದೆ. ಕೃಷ್ಣಸ್ವರ್ಣಸಂದ್ರ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ರೆ, ಸಿಂಧೂರಿ ಪಾತ್ರದಲ್ಲಿ ಅಕ್ಷತಾ ಪಾಂಡವಪುರ ನಟಿಸಲಿದ್ದಾರೆ.
ಭಾರತ ಸಿಂಧೂರಿ ಸಿನಿಮಾಗೂ ರೋಹಿಣಿ ಹಾಗೂ ಶಿಲ್ಪನಾಗ್ ಅವ್ರ ಜಟಾಪಟಿಗೂ ಯಾವುದೇ ಸಂಬಂಧವಿರುವುದಿಲ್ಲ. ಹಾಸನ, ಮೈಸೂರು, ಬೆಂಗಳೂರಿನಲ್ಲಿ ರೋಹಿಣಿ ಸಿಂಧೂರಿ ಮಾಡಿದ ಕೆಲಸಗಳನ್ನು ಗಮನದಲ್ಲಿಟ್ಕೊಂಡು ಈ ಸಿನಿಮಾ ಸಿದ್ಧವಾಗಲಿದೆ. ಸಿನಿಮಾ ನೋಡಲು ಕಾತುರರಾಗಿರೋದಾಗಿ ಸ್ವತ: ರೋಹಿಣಿ ಸಿಂಧೂರಿಯವ್ರೇ ತಿಳಿಸಿದ್ದಾರೆಂದು ನಿರ್ದೇಶಕ ವೆಬ್ಸೈಟ್ವೊಂದಕ್ಕೆ ಹೇಳಿದ್ದಾರೆ.