ಮೋಹಕತಾರೆ ರಮ್ಯಾ ಸಾಕಷ್ಟು ಸಮಯದಿಂದ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದಾರೆ. ರಾಜಕೀಯದಲ್ಲಿ ಸಕ್ರಿಯವಾಗಿದ್ರೂ ಇತ್ತೀಚೆಗೆ ಅದೂ ಅಷ್ಟೇನೂ ಇರಲಿಲ್ಲ. ಹಾಗಾದ್ರೆ ರಮ್ಯಾ ಮತ್ತೆ ಚಿತ್ರಗಳಲ್ಲಿ ನಟಿಸ್ತಾರಾ? ಹೀಗೊಂದು ಆಸೆ ಇಟ್ಕೊಂಡಿದ್ರು ಅವ್ರ ಅಭಿಮಾನಿಗಳು. ಆದ್ರೆ ಅದಕ್ಕೆಲ್ಲಾ ರಮ್ಯಾ ತಣ್ಣೀರೆರಚಿಬಿಟ್ಟಿದ್ದಾರೆ.
ರಮ್ಯಾ ‘ಅಭಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಸರಿಯಾಗಿ 18 ವರ್ಷಗಳ ಹಿಂದೆ ಪುನೀತ್ ರಾಜ್ಕುಮಾರ್ ಎರಡನೇ ಚಿತ್ರದ ಮೂಲಕ ಹೊಸಾನಟಿ ರಮ್ಯಾ ಕನ್ನಡಿಗರಿಗೆ ಪರಿಚಯವಾಗಿದ್ರು. ಇದನ್ನ ಅಭಿಮಾನಿಯೊಬ್ಬರು ರಮ್ಯಾಗೆ ನೆನಪಿಸಿದ್ದಕ್ಕೆ ಅವ್ರು ಸಖತ್ ಖುಷಿಪಟ್ಟರು. ಇನ್ಸ್ಟಾಗ್ರಾಮ್ ನಲ್ಲಿ ರಮ್ಯಾಗೆ ಯಾವಾಗ ಮರಳಿ ಸಿನಿಮಾಗಳಲ್ಲಿ ನಿಮ್ಮನ್ನು ನೋಡೋದು ಎಂದು ಅಭಿಮಾನಿಯೊಬ್ಬರು ಕೇಳಿದ್ರು, ಅದಕ್ಕೆ ರಮ್ಯಾ ಆ ದಿನ ಎಲ್ಲಾ ಮುಗಿದು ಹೋಗಿದೆ, ಮತ್ತೆ ನಟಿಸುವ ಮಾತೇ ಇಲ್ಲ ಎಂದಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ರಮ್ಯಾ ಅಭಿಮಾನಿಗಳ ಜೊತೆ ಇವತ್ತು ಪ್ರಶ್ನೋತ್ತರ ಸರಣಿ ನಡೆಸಿದ್ರು. ಅದರಲ್ಲಿ ಅಭಿಮಾನಿಗಳ ಅನೇಕ ಪ್ರಶ್ನೆಗಳಿಗೆ ಮೋಹಕತಾರೆ ಉತ್ತರಿಸಿದ್ರು. ಆಗ ಈ ಎಲ್ಲಾ ವಿಚಾರಗಳೂ ಬಂದವು. ಈಗೇನಿದ್ರೂ ಆರಾಮಾಗಿ ಪುಸ್ತಕ ಓದ್ಕೊಂಡು, ಸಿನಿಮಾ-ವೆಬ್ ಸೀರೀಸ್ ನೋಡ್ಕೊಂಡು ರಿಲ್ಯಾಕ್ಸ್ ಮಾಡ್ತಿದೀನಿ ಎಂದಿದ್ದಾರೆ ರಮ್ಯಾ. ಏನೇ ಇದ್ರೂ ರಮ್ಯಾ ಮತ್ತೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲ್ಲ ಎಂದಿದ್ದು ಅಭಿಮಾನಿಗಳಿಗೆ ಬೇಸರವಾಗಿದ್ದಂತೂ ಸತ್ಯ. ಹೋಗ್ಲಿ ರಾಜಕೀಯಕ್ಕಾದ್ರೂ ಬರಬಹುದಾ? ಎಂದು ಕೇಳಿದ್ದಾರೆ. ಅದಕ್ಕೂ ಇಲ್ಲಾ ಇಲ್ಲಿಗೆ ಮುಗೀತು ಎಂದಿದ್ದಾರೆ.