ಕಳೆದ 10 ದಿನಗಳಿಂದ ರಕ್ಷಿತ್ ಹಾಗೂ ಖಾಸಗಿ ವಾಹಿನಿ ನಡುವೆ ಸಮರ ನಡೆಯುತ್ತಿತ್ತು. ಆಗ ಜುಲೈ 11ಕ್ಕೆ ಉತ್ತರ ಕೊಡ್ತೀನಿ ಎಂದು ಗುಡುಗಿದ್ದ ರಕ್ಷಿತ್ ಶೆಟ್ಟಿ ಕೊನೆಗೂ ಉತ್ತರಕೊಟ್ಟಿದ್ದಾರೆ. ರಿಚರ್ಡ್ ಆಂಟನಿ ಅವತಾರವೆತ್ತಿ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಉತ್ತರ ಕೊಡ್ತೀನಿ ಪುಟಿದೆದ್ದು ನಿಂತಾಗ, ಸಿನಿಮಾ ಮೂಲಕನೇ ಉತ್ತರ ಕೊಡ್ಬಹುದು ಅನ್ನೋ ನಿರೀಕ್ಷೆ ಏನೋ ಇತ್ತು. ಆದ್ರೆ, 7 ವರ್ಷಗಳ ಬಳಿಕ ಮತ್ತೆ ನಿರ್ದೇಶನ ಮಾಡ್ತಾರೆ ಅನ್ನೋ ಸುಳಿವು ಖಂಡಿತಾ ಇರಲಿಲ್ಲ.
ರಕ್ಷಿತ್ ಶೆಟ್ಟಿ ಉಳಿದವರು ಕಂಡಂತೆ ಸಿನಿಮಾ ನಿರ್ದೇಶಿಸಿದಾಗ, ಹಲವರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ವಿಭಿನ್ನ ಸಿನಿಮಾ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡಲಾಗಿತ್ತು. ಚಿತ್ರಕಥೆ ವಿಭಿನ್ನವಾಗಿತ್ತು. ರಕ್ಷಿತ್ ಶೆಟ್ಟಿ ರಿಚ್ಚಿಯಾದಾಗ ನಾಯಕನೋ, ಖಳನಾಯಕನೋ ಅನ್ನೋ ಅನುಮಾನ ಮೂಡುವಷ್ಟು ಕನ್ಫ್ಯೂಸ್ ಮಾಡಿತ್ತು. ಈಗ ಮತ್ತೆ ಅದೇ ರಿಚ್ಚಿ ದರ್ಶನ ಕೊಡೋಕೆ ವೇದಿಕೆ ಸಿದ್ದವಾಗಿದೆ. ಅದಕ್ಕಾಗಿ ಒಂದು ಚಿಕ್ಕ ಝಲಕ್ ಕೂಡ ಸಿದ್ಧಪಡಿಸಿ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.
ರಿಚ್ಚಿನೇ ರಿಚರ್ಡ್.. ರಿಚರ್ಡ್ ರಿಚ್ಚಿ.. ಹೀಗಾಗಿ ಉಳಿದವರು ಕಂಡಂತೆ ರಿಚ್ಚಿ ಸಾವನ್ನಪ್ಪಿದ್ದ ಅಂದ್ಮೇಲೆ ಮತ್ತೆ ಹೇಗೆ ಬಂದ ಅನುಮಾನ ಮೂಡೋದು ಸಹಜ. ರಿಚರ್ಟ್ ಆಂಟನಿ ತುಣುಕು ನೋಡಿದ್ರೆ, ಆತನದ್ದೇ ಸಮಾಧಿ, ಅದರ ಮೇಲೊಂದು ಕಾಗೆ. ಪಕ್ಕದಲ್ಲೇ ನಿಂತು ಕಿಡಿಕಾರುತ್ತಿರೋ ನಟ ಅಚ್ಯುತ್. ಟೈಟಲ್ ಮೇಲೆ Before, After ಅನ್ನೋ ಟ್ಯಾನ್ಲೈನ್. ಇದನ್ನು ನೋಡಿದ್ಮೇಲೆ ಇದು ಉಳಿದವರು ಕಂಡಂತೆ ಸಿನಿಮಾದ ಪ್ರೀಕ್ವೆಲ್ ಸಿನಿಮಾ ಸೀಕ್ವೆಲ್ ಸಿನಿಮಾನೋ ಅನ್ನೋ ಅನುಮಾನ ಮೂಡೋದು ಸಹಜ. ಆದರೆ, ಈ ಗುಟ್ಟಿನ್ನು ರಕ್ಷಿತ್ ಶೆಟ್ಟಿ ಬಳಿಯೇ ಇದೆ.
KGF, ಸಲಾರ್, ದ್ವಿತ್ವ ಸಿನಿಮಾಗಳನ್ನು ನಿರ್ಮಿಸ್ತಿರೋ ಹೊಂಬಾಳೆ ಫಿಲಂಸ್ನ ವಿಜಯ್ ಕಿರಂಗಂದೂರು ನಿರ್ಮಾಪಕರಾಗಿದ್ದಾರೆ. 2022ರಿಂದ ರಕ್ಷಿತ್ ಶೆಟ್ಟಿ ಈ ಸಿನಿಮಾ ಆರಂಭಿಸಲಿದ್ದಾರೆ. ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಷ್ಟರೊಳಗೆ 777 ಚಾರ್ಲಿ, ಸಪ್ತಸಾಗರದಾಚೆ ಈ ಎರಡೂ ಸಿನಿಮಾಗಳು ಬಿಡುಗಡೆಯಾಗ್ಬೇಕಿದೆ.