ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಮಾ ಯುವರತ್ನ ಏಪ್ರಿಲ್ 1 ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಹೀಗಾಗಿ ಇಡೀ ತಂಡ ಒಂದು ವಾರಕ್ಕೂ ಮುನ್ನವೇ ಭರ್ಜರಿ ಪ್ರಚಾರ ಆರಂಭಿಸಿದೆ. ಉತ್ತರ ಕರ್ನಾಟಕದ ಕಡೆ ಇಡೀ ತಂಡ ಪಯಣ ಬೆಳೆಸಿದೆ. ಪವರ್ಸ್ಟಾರ್ ಜೊತೆ ಡಾಲಿ ಧನಂಜಯ್, ಹಾಸ್ಯ ನಟ ರವಿಶಂಕರ್, ನಿರ್ದೇಶಕ ಸಂತೋಷ್ ಆನಂದ್ರಾಮ್ ಯುವ ಸಂಭ್ರಮಕ್ಕೆ ಮುಂದಾಗಿದ್ದಾರೆ.
ಮಾರ್ಚ್ 21 ಭಾನುವಾರದಿಂದ ಯುವ ಸಂಭ್ರಮ ಶುರುವಾಗಿದ್ದು, ಯುವರತ್ನ ತಂಡ ಕಲಬುರ್ಗಿಗೆ ಪಯಣ ಬೆಳೆಸಿತ್ತು. ಅದ್ಧೂರಿ ಸ್ವಾಗತ ಸ್ವೀಕರಿಸಿದ ಬಳಿಕ, ಪುನೀತ್ ಕಲಬುರ್ಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ರು. ನನ್ನ ಮುಂದಿನ ಸಿನಿಮಾವನ್ನ ಕಲಬುರ್ಗಿಯಲ್ಲೇ ಶೂಟ್ ಮಾಡುವುದಾಗಿ ತಿಳಿಸಿದ್ರು.
ಕಲಬುರ್ಗಿ ಪಯಣದ ಬಳಿಕ ಪುನೀತ್ ಕುಂದಾನಗರಿ ಬೆಳಗಾವಿಯ ಅಭಿಮಾನಿಗಳನ್ನ ಭೇಟಿ ಮಾಡಿದ್ರು. ಪವರ್ಸ್ಟಾರ್ ಅನ್ನ ಡೊಳ್ಳುಕುಣಿತ ಹಾಗೂ ಹೂಮಳೆ ಮೂಲಕ ಅದ್ಧೂರಿ ಸ್ವಾಗತ ನೀಡಿದ್ರು. ಈ ವೇಳೆ ಅಭಿಮಾನಿಗಳಿಗೆ ಯುವರತ್ನ ಸಿನಿಮಾದ ಡೈಲಾಗ್ ಹೊಡೆದು ಅಭಿಮಾನಿಗಳನ್ನ ರಂಜಿಸಿದ್ರು.
ಯುವಸಂಭ್ರಮದ ಮೊದಲ ದಿನವೇ ಹುಬ್ಬಳ್ಳಿಗೂ ಎಂಟ್ರಿ ಕೊಟ್ಟಿತ್ತು. ಈ ವೇಳೆ ಪುನೀತ್ ರಾಜ್ಕುಮಾರ್ ನೋಡಲು ಅರ್ಬನ್ ಓಯಾಸಿಸ್ ಮಾಲ್ನಲ್ಲಿ ಅಭಿಮಾನಿಗಳು ಸೇರಿದ್ದರು. ಮಾರ್ಚ್ 22 ರಂದು ಬಳ್ಳಾರಿಯ ದುರ್ಗಾಂಬ ದೇವಸ್ಥಾನ, ಚಿತ್ರದುರ್ಗ ಮಾಧ್ಯಮಿಕ ಶಾಲೆ, ತುಮಕೂರಿನ ಎಸ್ಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಭಿಮಾನಿಗಳನ್ನ ಭೇಟಿಯಾಗಲಿದ್ದಾರೆ.