ಕಳೆದೆರಡು ದಿನಗಳಿಂದ ಚಿತ್ರರಂಗ ಅಲ್ಲೋಲ ಕಲ್ಲೋಲ ಆಗಿತ್ತು. ರಾಜ್ಯ ಸರ್ಕಾರ ಸಿನಿಮಾ ಹಾಲ್ಗಳಲ್ಲಿ ಮತ್ತೆ ಶೇ.50ರಷ್ಟು ಸೀಟಿಂಗ್ ವ್ಯವಸ್ಥೆಗೆ ಆದೇಶಿಸಿದೆ ಅನ್ನೋ ವಿಷ್ಯ ಹೊರಬಿದ್ದಲ್ಲಿಂದ ಆಕ್ರೋಶ ವ್ಯಕ್ತವಾಗಿತ್ತು. ಪುನೀತ್ ರಾಜ್ಕುಮಾರ್ ಸೇರಿದಂತೆ ಇಡೀ ಚಿತ್ರರಂಗ ಬೇಸರ ವ್ಯಕ್ತಪಡಿಸಿದ್ದರು. ಸಂಜೆ ವೇಳೆಗೆ ಪುನೀತ್, ನಿರ್ದೇಶಕ ಸಂತೋಷ್ ಆನಂದ್ರಾಮ್, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಿ.ಎಂ ಯಡಿಯೂರಪ್ಪ ಅವ್ರನ್ನ ಭೇಟಿಯಾಗಿ ಚರ್ಚೆ ನಡೆಸಿದ್ರು.
ಈ ಚರ್ಚೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಲಕ್ಷಣ ಸವದಿ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು. ಯುವರತ್ನ ಬಿಡುಗಡೆಯಾಗಿ ಎರಡು ದಿನ ಆಗಿಲ್ಲ. ಅಷ್ಟರಲ್ಲೇ 8 ಜಿಲ್ಲೆಗಳಲ್ಲಿ ಚಿತ್ರಮಂದಿರ ಸೀಟಿಂಗ್ ಆಕ್ಯೂಪೆನ್ಸಿಯನ್ನ 50 ಪರ್ಸೆಂಟ್ಗೆ ಇಳಿಸಲಾಗಿದೆ. ಇದ್ರಿಂದ ಚಿತ್ರತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ಸಿ ಎಂಗೆ ಮನವರಿಕೆ ಮಾಡಿಕೊಡುವಲ್ಲಿ ಪುನೀತ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವ್ರಿಗೂ, ತಮ್ಮ ಅಭಿಮಾನಿಗಳಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.
ಹೀಗಾಗಿ ಏಪ್ರಿಲ್ 7ರವರೆಗೂ ಥಿಯೇಟರ್ಗಳಲ್ಲಿ ಶೇ 100ರಷ್ಟು ಸೀಟಿಂಗ್ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿದೆ. ಬಳಿಕ ಯಥಾಪ್ರಕಾರ ಶೇ. 50ರಷ್ಟು ಸೀಟಿಂಗ್ ವ್ಯವಸ್ಥೆ ಮುಂದುವರೆಯುತ್ತಿದೆ. ಅಲ್ಲಿಗೆ ಯುವರತ್ನ ಒಂದು ವಾರ 100 ಪರ್ಸೆಂಟ್ ಆಕ್ಯೂಪೆನ್ಸಿಯಲ್ಲೇ ಪ್ರದರ್ಶನಗೊಂಡಂತಾಗುತ್ತೆ. ಆದ್ರೆ, ಎರಡನೇ ವಾರದಿಂದ ಸಿನಿಮಾಗಳ ಗತಿಯೇನು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಯುವರತ್ನ ಬಳಿಕ ದುನಿಯಾ ವಿಜಯ್ ಸಲಗ ಬಿಡುಗಡೆಗೆ ಸಜ್ಜಾಗಿತ್ತು. ಸಲಗ ಹಿಂದೆನೇ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಹಾಗೂ ಶಿವಣ್ಣ ಅಭಿನಯದ ಭಜರಂಗಿ 2 ಚಿತ್ರಗಳು ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಈ ಸಿನಿಮಾಗಳು ಯಾವ ನಿರ್ಧಾರ ಕೈಗೊಳ್ಳುತ್ತಾವೆ ಅನ್ನೋದು ದೊಡ್ಡ ತಲೆನೋವಾಗಿದೆ.