ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಾ ಇದ್ದಂತೆ ಮತ್ತೆ ಕಠಿಣ ನಿಯಮಗಳನ್ನು ಜಾರಿ ಮಾಡೋಕೆ ಸರ್ಕಾರ ಸಜ್ಜಾಗ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಸಂಪೂರ್ಣವಾಗಿ ತೆರೆದಿರುವ ಚಿತ್ರಮಂದಿರಗಳಲ್ಲಿ ಮತ್ತೆ ಹಿಂದಿನಂತೆ 50% ಆಸನಗಳನ್ನು ಮಾತ್ರ ಬಳಸುವಂತೆ ಅವಕಾಶ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜ್ಯ ಸರ್ಕಾರದ ಮುಂದೆ ಇರಿಸಿತ್ತು. ಈಗೀಗ ಚೇತರಿಸಿಕೊಳ್ತಿರೋ ಕನ್ನಡ ಚಿತ್ರರಂಗದ ಕಡೆಯಿಂದ ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ರು. ದಯವಿಟ್ಟು ಚಿತ್ರಮಂದಿರಗಳಲ್ಲಿ ಜನರ ಆಗಮನಕ್ಕೆ ಕಡಿವಾಣ ಹಾಕಬೇಡಿ… ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು ಮುಂತಾದ ನಿಯಮಗಳನ್ನು ಬೇಕಿದ್ದರೆ ಇನ್ನಷ್ಟು ಕಠಿಣಗೊಳಿಸಿ. ಆದರೆ ಮತ್ರೆ ಚಿತ್ರಮಂದಿರಗಳು ಅರ್ಧದಷ್ಟು ಖಾಲಿಯಾದರೆ ಚಿತ್ರರಂಗ ನಲುಗಿಹೋಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಂಡಿದ್ದರು ಅಪ್ಪು. ಚಿತ್ರರಂಗದ ಅನೇಕ ಹಿರಿ-ಕಿರಿಯರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ರು.
ಸಂಜೆಯ ವೇಳೆಗೆ ಈ ಎಲ್ಲಾ ಆತಂಕ ಮತ್ತು ಗೊಂದಲಗಳಿಗೆ ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ತೆರೆ ಎಳೆದಿದ್ದಾರೆ. ಚಿತ್ರಮಂದಿರಗಳಲ್ಲಿ ಆಸನಗಳನ್ನು ಕಡಿಮೆ ಮಾಡುವ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಸರ್ಕಾರ ಕೂಡಾ ಈ ಬಗ್ಗೆ ಯಾವುದೇ ಬದಲಾವಣೆ ಮಾಡುತ್ತಿಲ್ಲ. ಈಗ ಇರುವಂತೆಯೇ 100% ಸೀಟುಗಳನ್ನು ಬಳಸಲು ಅವಕಾಶವಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಸಮಾಧಾನದಲ್ಲಿದ್ದಾರೆ ಸ್ಯಾಂಡಲ್ ವುಡ್ ಮಂದಿ.