ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್ ಮತ್ತೊಂದು ಸಿನಿಮಾ ನಿರ್ಮಿಸುತ್ತಿದೆ. ಹೊಸ ಪ್ರತಿಭೆಗಳ ಜೊತೆ ಹಿರಿಯ ನಟರನ್ನು ಸೇರಿಕೊಂಡು ನಿರ್ಮಿಸುತ್ತಿರೋ ಫ್ಯಾಮಿಲಿ ಪ್ಯಾಕ್ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಹೀಗಾಗಿ ಚಿತ್ರೀಕರಣದ ಕೊನೆಯ ದಿನ ಪುನೀತ್ ರಾಜ್ಕುಮಾರ್ ಹಾಗೂ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಶೂಟಿಂಗ್ ಸ್ಟಾಟ್ಗೆ ಭೇಟಿ ನೀಡಿದ್ರು. ಈ ವೇಳೆ ಚಿತ್ರೀಕರಣ ವೀಕ್ಷಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ರು.
ಫ್ಯಾಮಿಲಿ ಪ್ಯಾಕ್ ಚಿತ್ರವನ್ನು ಬೆಂಗಳೂರಿನ ಹಲವೆಡೆ ಚಿತ್ರೀಕರಣ ಮಾಡಲಾಗಿದೆ. ಮೂವತ್ತಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣ ನಡೆದಿದ್ದು, ಸಿನಿಮಾವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಾಯಕ ಲಿಖಿತ್ ಶೆಟ್ಟಿ, ಅಮೃತ ಅಯ್ಯಂಗಾರ್, ರಂಗಾಯಣ ರಘು, ಅಚ್ಯುತಕುಮಾರ್, ಪದ್ಮಜಾರಾವ್, ಶರ್ಮಿತಾ ಗೌಡ, ಸಿಹಿಕಹಿ ಚಂದ್ರು ಕೊನೆಯ ದಿನದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಪಕ್ಕಾ ಮನರಂಜನೆಯಾಧಾರಿತ ಚಿತ್ರ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ನಾಯಕ ಲಿಖಿತ್ ಶೆಟ್ಟಿ ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಸಂಕಷ್ಟಕರ ಗಣಪತಿ ಅನ್ನೋ ಸಿನಿಮಾ ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಫ್ಯಾಮಿಲಿ ಪ್ಯಾಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಲಿಖಿತ್ ಶೆಟ್ಟಿ ಜೊತೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಅಚ್ಯುತಕುಮಾರ್, ಸಿಹಿಕಹಿ ಚಂದ್ರು, ಪದ್ಮಜಾರಾವ್, ಶರ್ಮಿತಾಗೌಡ, ನಾಗಭೂಷಣ್ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದು, ಮಾಸ್ತಿ ಫ್ಯಾಮಿಲಿ ಪ್ಯಾಕ್ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ.