ಪುನೀತ್ ರಾಜ್ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ಹೊಸ ‘ದ್ವಿತ್ವ’ ಪೋಸ್ಟರ್ ನಿನ್ನೆ ರಿಲೀಸ್ ಆಗಿತ್ತು. ಸೈಕಲಾಜಿಕಲ್ ಥ್ರಿಲ್ಲರ್ ಕಥೆಗೆ ತಕ್ಕಂತೆ ಚಿತ್ರತಂಡ ಪೋಸ್ಟರ್ ಡಿಸೈನ್ ಮಾಡಿತ್ತು. ಮಾಸ್ ಅಭಿಮಾನಿಗಳಿಗೆ ಟೈಟಲ್ ಕೊಂಚ ಕಸಿವಿಸಿ ಅನ್ನಿಸಿದ್ರು, ಪೋಸ್ಟರ್ ಕಿಕ್ ಕೊಟ್ಟಿತ್ತು. ಕೆಲವೇ ಗಂಟೆಗಳಲ್ಲಿ ಪೋಸ್ಟರ್ ನಕಲು ಅನ್ನೋದು ಗೊತ್ತಾಗಿ ಹೋಗಿತ್ತು. ಈಗ ಇಂಟರ್ ನೆಟ್ ಜಮಾನ. ಇಡೀ ಪ್ರಪಂಚ ಅಂಗೈಯಲ್ಲಿದೆ. ಹಿಂಗಿರುವಾಗ ಕದ್ದು ಮುಚ್ಚಿ ಮೋಸ ಮಾಡೋಕೆ ಸಾಧ್ಯವಿಲ್ಲ. ಅಂದಹಾಗೆ ಪೋಸ್ಟರ್ ಡಿಸೈನ್ ಬಗ್ಗೆ ಇದೀಗ ಚಿತ್ರದ ಗ್ರಾಫಿಕ್ ಡಿಸೈನರ್ ಆದರ್ಶ್ ಸೋಷಿಯಲ್ ಮೀಡಿಯಾದಲ್ಲಿ ಸುಧೀರ್ಘ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿದೆ ಏನಿದೆ ಅನ್ನೋದನ್ನ ನೀವೇ ನೋಡಿ.
ದಿನಾಂಕ 01-07-2021 ರಂದು ಬಿಡುಗಡೆಗೊಳಿಸಿರುವ ಹೊಂಬಾಳೆ ಫಿಲಿಂಸ್ ನಿರ್ಮಾಣದ ಹಾಗೂ ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’ ಚಿತ್ರದ ಟೈಟಲ್ ಲಾಂಚ್ ಪೋಸ್ಟರ್ ವಿವಾದದ ಕುರಿತು ಸ್ಪಷ್ಟಿಕರಣ ನೀಡುವ ಸಲುವಾಗಿ ಈ ಬಹಿರಂಗ ಪತ್ರ ಬರೆಯುತ್ತಿದ್ದೇನೆ.
‘ದ್ವಿತ್ವ’ ಟೈಟಲ್ ಲಾಂಚ್ ಮಾಡಲು ಬಳಸಲಾಗಿರುವ ಪೋಸ್ಟರ್ ಕಾಪಿ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ಪೋಸ್ಟರ್ಗೆ ಹೋಲಿಕೆಯಾಗುವ ಆ ಚಿತ್ರ ಗೂಗಲ್ ತಾಣದಲ್ಲಿಯಾಗಲಿ ಅಥವಾ ಇನ್ನಾವುದೇ ಉಚಿತ ಚಿತ್ರ ಜಾಲತಾಣದಿಂದ ಉಚಿತವಾಗಿ ಪಡೆದಿರುವುದಲ್ಲ, ಬದಲಾಗಿ ಆ ಪ್ರೀಮಿಯಮ್ ಸ್ಟಾಕ್ ಚಿತ್ರವನ್ನು ‘ ಷಟರ್ ಸ್ಟಾಕ್’ ಎಂಬ ಪ್ರೀಮಿಯಮ್ ಇಮೇಜ್ ಪ್ರೊವೈಡರ್ ಸಂಸ್ಥೆಯ ಬಳಿ ಖರೀದಿಸಲಾಗಿದೆ ಎಂಬ ವಿಚಾರ ತಿಳಿಯಪಡಿಸುತ್ತಿದ್ದೇವೆ.
ಸಾಮಾನ್ಯವಾಗಿ ಪೋಸ್ಟರ್ ಡಿಸೈನರ್ಸ್ ಯಾವಾಗಲೂ ಪೋಸ್ಟರ್ ಡಿಸೈನಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಅವಶ್ಯಕತೆಗೆ ಅನುಗುಣವಾಗಿ ಪ್ರೀಮಿಯಮ್ ಸ್ಟಾಕ್ ವೆಬ್ ಸೈಟುಗಳ ಮೇಲೆ ಅವಲಂಭಿತವಾಗಿರುತ್ತೇವೆ ಎಂದು ತಿಳಿಸಲು ಇಚ್ಚಿಸುತ್ತಿದ್ದೇನೆ. ದ್ವಿತ್ವ ಪೋಸ್ಟರ್ ವಿಚಾರಕ್ಕೆ ಬರುವುದಾದರೆ, ಈ ಚಲನಚಿತ್ರಕ್ಕೆ ಪೋಸ್ಟರ್ ಡಿಸೈನರ್ ಆಗಿ ನನ್ನನ್ನ ಸಿನೆಮಾ ತಂಡದವರು ಆಯ್ಕೆ
ಮಾಡಿಕೊಂಡಾಗ ನಾವೆಲ್ಲರೂ ಲಾಕ್ ಡೌನ್ ನಲ್ಲಿದ್ದೆವು. ಆದಕಾರಣ ಚಿತ್ರದಲ್ಲಿ ಬರುವ ಪುನೀತ್ ರಾಜ್ ಕುಮಾರ್ ಅವರ ಪಾತ್ರದ ವಿಶೇಷತೆಗೆ ಅನುಗುಣವಾಗಿ ಅವರ ಫೋಟೋ ಶೂಟ್ ಮಾಡಲು ಸಾಧ್ಯವಾಗಲಿಲ್ಲ. ಆಗ ನಿರ್ದೇಶಕರಾದ ಪವನ್ ಕುಮಾರ್ ಅವರ ಸಲಹೆಯ ಮೇರೆಗೆ ಚಿತ್ರದ ಪರಿಕಲ್ಪನೆಗೆ ಧಕ್ಕೆ ಬಾರದಂತೆ ಅಮೂರ್ತವಾದ (abstract poster) ಪೋಸ್ಟರ್ ಡಿಸೈನ್
ತಯಾರಿಸಬೇಕಾಗಿ ಬಂತು. ಆಗ ನಮ್ಮ ಸಂಸ್ಥೆಯಿಂದ ಖರೀದಿ ಮಾಡಲಾಗಿದ್ದ ಆಕರ ಚಿತ್ರವನ್ನು ತೋರಿಸಿದೆವು ಅದು ನಿರ್ದೇಶಕರಿಗೆ ಒಪ್ಪಿತವಾಗಿ ಅದೇ ಡಿಸೈನ್ ಆಧಾರವಾಗಿಟ್ಟುಕೊಂಡು ಪುನೀತ್ ರಾಜ್ ಕುಮಾರ್ ಅವರ ಮುಖಚಿತ್ರದ ಜೊತೆಗೆ ಪೋಸ್ಟರ್ ಡಿಸೈನ್ ಮಾಡಲು ಸೂಚಿಸಿದರು. ಅದರಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.
ನಿರ್ದೇಶಕ ಪವನ್ ಕುಮಾರ್ ಹಾಗೂ ಚಿತ್ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಿಂಗ್ ಸಂಸ್ಥೆಯವರಿಗೆ ನಾವು ಷಟರ್ ಸ್ಟಾಕ್ ಸಂಸ್ಥೆಯ ಬಳಿ ಖರೀದಿಸಿರುವ ಸ್ಟಾಕ್ ಇಮೇಜ್ ಕುರಿತಾಗಿ ಈ ಮೊದಲು ತಿಳಿದಿರುವುದಿಲ್ಲ ಎಂಬುದನ್ನು ಹೇಳಬಯಸುತ್ತೇನೆ. ನಾವು ಬಿಡುಗಡೆಗೊಳಿಸಿರುವ ಪೋಸ್ಟರ್ ಡಿಸೈನ್ ಬಗ್ಗೆ ಮಾತ್ರ ಅವರಿಗೆ ತಿಳಿದಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ನಂತರವಷ್ಟೇ ಅವರಿಗೆ ನಾವು ಖರೀದಿಸಿರುವ ಆಕರ ಚಿತ್ರದ ಬಗ್ಗೆ ತಿಳಿಸಿದೆವು. ಮೂಲ ಚಿತ್ರ ನಮ್ಮ ಕ್ರಿಯೇಟೀವ್ ಕ್ರಿಟ್ ಸಂಸ್ಥೆಯಿಂದ ಸೃಷ್ಟಿಸಿರುವ ಚಿತ್ರ ಅಲ್ಲದಿದ್ದರೂ ಅದರ ಮೇಲಿನ ಎಲ್ಲಾ ಲೀಗಲ್ ಹಕ್ಕುಗಳು ನಮ್ಮವೇ ಆಗಿರುತ್ತವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳೂ ನಮ್ಮ ಬಳಿ ಇವೆ. ಹಾಗಾಗಿ ನಾವು ಖರೀದಿಸಿರುವ ಆಕರ ಚಿತ್ರ ಯಾರದ್ದೇ ಬೌದ್ಧಿಕ ಆಸ್ತಿಯಾಗಿರುವುದಿಲ್ಲ. ಒಂದು ಡಿಸೈನ್ ಏಜೆನ್ಸಿಯಾಗಿ ನಮ್ಮ ಡಿಸೈನ್ ಗಳಿಗೆ ಅವಶ್ಯಕತೆಯಿರುವ ಮತ್ತು ಹೊಂದುವಂತಹ ಆಕರ ಚಿತ್ರಗಳನ್ನ ಖರೀದಿ ಮಾಡುವುದು ಮತ್ತು ಅವುಗಳನ್ನ ನಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವುದು ನಮ್ಮ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಲು ಇಚ್ಚಿಸುತ್ತೇನೆ.
ನನ್ನ ಈ ಸ್ಪಷ್ಟಿಕರಣದಿಂದ ಎಲ್ಲ ಅನುಮಾನಗಳಿಗೂ ಉತ್ತರ ಸಿಕ್ಕಿದೆ ಎಂದು ಭಾವಿಸಿ ಸಂಬಂಧಿಸಿದ ನಿರ್ದೇಶಕರನ್ನು ಮತ್ತು ನಿರ್ಮಾಣ ಸಂಸ್ಥೆಯನ್ನು ಈ ವಿಚಾರವಾಗಿ ವಿವಾದಕ್ಕೆ ಸಿಲುಕಿಸಬಾರದೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ದ್ವಿತ್ವ ಚಿತ್ರದ ಟೈಟಲ್ ಪೋಸ್ಟರ್ ಗೆ ನೀವು ತೋರಿಸಿದ ಅಗಾಧ ಪ್ರೀತಿ ತುಂಬಿದ ಪ್ರತಿಕ್ರಿಯೆಗೆ ನಮ್ಮ ಅನಂತ ಅನಂತ ಧನ್ಯವಾದಗಳು’
- ಕ್ರಿಯೇಟಿವ್ ಕ್ರಿವ್ ಡಿಸೈನ್ ಲ್ಯಾಬ್
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಪುನೀತ್ ರಾಜ್ಕುಮಾರ್ ಅಭಿನಯಿಸ್ತಿರೋ ನಾಲ್ಕನೇ ಸಿನಿಮಾ ದ್ವಿತ್ವ. ಸದ್ಯ ಟೈಟಲ್ ಫೈನಲ್ ಮಾಡಿರೋ ಚಿತ್ರತಂಡ ಶೀಘ್ರದಲ್ಲೇ ಸಿನಿಮಾ ಮುಹೂರ್ತ ನೆರವೇರಿಸಲು ತಯಾರಿ ನಡೆಸಿದೆ.