ಸೂಪರ್ಸ್ಟಾರ್ ಸಿನಿಮಾಗಳು ಅಂದ್ರೆ, ಅಲ್ಲೊಂದಿಷ್ಟು ಅಂಶಗಳು ಇರಲೇಬೇಕು. ಸೂಪರ್ ಫೈಟ್ ಇರ್ಬೇಕು. ಮಸ್ತ್ ಡ್ಯಾನ್ಸ್ ಇರ್ಬೇಕು. ರಫ್ ಅಂಡ್ ಟಫ್ ಡೈಲಾಗ್ ಇರ್ಬೇಕು. ಅದ್ರಲ್ಲೂ ಪುನೀತ್ ರಾಜ್ಕುಮಾರ್ ಸಿನಿಮಾ ಅಂದ್ರಂತೂ ಅಭಿಮಾನಿಗಳಿಗೆ ಡ್ಯಾನ್ಸ್, ಫೈಟ್ ಅಂತೂ ಇರ್ಲೇಬೇಕು. ಆದ್ರೀಗ ರೆಗ್ಯೂಲರ್ ಸಿನಿಮಾಗಳಿಗೆ ಬ್ರೇಕ್ ಕೊಟ್ಟು, ಕಂಟೆಂಟ್ ಸಿನಿಮಾಗಳ ಕಡೆ ಮುಖ ಮಾಡ್ತಿದ್ದಾರೆ ಅನ್ನೋ ಸೂಚನೆ ಕೊಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ ಯುವರತ್ನ ಬಳಿಕ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈಬಾರಿ ಪಕ್ಕಾ ಕಮರ್ಷಿಯಲ್ ಸಿನಿಮಾಗಳ ನಿರ್ದೇಶಕರನ್ನ ಬಿಟ್ಟು, ಕಥೆಯನ್ನೇ ನೆಚ್ಚಿಕೊಂಡಿರೋ ಸಿನಿಮಾಗಳ ನಿರ್ದೇಶಕರೊಂದಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಫಿಲ್ಮಿ ಬೀಟ್ ಪ್ರಕಾರ, ಲೂಸಿಯಾ, ಯು-ಟರ್ನ್ ಅಂತಹ ಸಿನಿಮಾಗಳನ್ನ ನಿರ್ದೇಶಿಸಿರೋ ಪವನ್ ಕುಮಾರ್ ಸಿನಿಮಾದಲ್ಲಿ ಅಪ್ಪು ಅಭಿನಯಿಸ್ತಾರೆ.
ಇನ್ನು ಅಪ್ಪು ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಅಂತನೂ ವರದಿಯಾಗಿದೆ. ಹೀಗಾಗಿ ಅಪ್ಪು ಅಭಿಮಾನಿಗಳು ಯಾವಾಗ ಸಿನಿಮಾ ಅನೌನ್ಸ್ ಆಗುತ್ತೋ? ಸಿನಿಮಾದಲ್ಲಿ ಕಥೆ ಹೇಗಿರುತ್ತೋ? ಅನ್ನೋದನ್ನ ಕೇಳೋಕೆ ಕಾಯ್ತಿದ್ದಾರೆ.
ಸದ್ಯ ಪುನೀತ್ ರಾಜ್ಕುಮಾರ್ ಜೇಮ್ಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನ ಭರ್ಜರಿ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ನಿರ್ದೇಶಿಸುತ್ತಿದ್ದಾರೆ. ಹಲವು ದಿನಗಳಿಂದ ಜೇಮ್ಸ್ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಪಕ್ಕಾ, ಆ್ಯಕ್ಷನ್ ಕಮರ್ಷಿಯಲ್ ಸಿನಿಮಾದಲ್ಲಿ ಪುನೀತ್ ಕಾಣಿಸಿಕೊಳ್ಳಲಿದ್ದಾರೆ.