ಬಹಳ ದಿನಗಳಿಂದ ಇದೊಂದು ಕ್ಷಣಕ್ಕಾಗಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಕಾದು ಕೂತಿದ್ದರು. ಯೂಟರ್ನ್ ನಿರ್ದೇಶಕ ಪವನ್ ಕುಮಾರ್ ಜೊತೆ ಅಪ್ಪು ಸಿನಿಮಾ ಯಾವಾಗ ಸೆಟ್ಟೇರುತ್ತೆ? ಸಿನಿಮಾದ ಟೈಟಲ್ ಏನಿರುತ್ತೆ? ಅಂತ ತಮ್ಮಲ್ಲೇ ಪ್ರಶ್ನೆಗಳನ್ನು ಹಾಕಿಕೊಂಡಿದ್ದರು. ಆ ಎಲ್ಲಾ ಕುತೂಹಲಗಳಿಗೂ ಈಗ ಉತ್ತರ ಸಿಕ್ಕಿದೆ. ಪುನೀತ್ ರಾಜ್ಕುಮಾರ್ ಹಾಗೂ ಲೂಸಿಯಾ ಪವನ್ ಕುಮಾರ್ ಜೋಡಿಯ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ. ಚಿತ್ರಕ್ಕೆ ದ್ವಿತ್ವ ಅಂತ ಹೆಸರಿಡಲಾಗಿದೆ. ಆದ್ರೆ, ಈ ಸಿನಿಮಾಗೂ ಗಾಳಿಪಟಗೂ ಒಂದು ಲಿಂಕ್ ಇದೆ.
ಪವನ್ ಕುಮಾರ್ ನಿರ್ದೇಶಿಸ್ತಿರೋ ದ್ವಿತ್ವ ಸಿನಿಮಾದ ಕಥೆ ಇಂದು, ನಿನ್ನೆ ಹುಟ್ಟುಕೊಂಡಿದ್ದಲ್ಲ. ಪವನ್ ಯೋಗರಾಜ್ ಭಟ್ಟರ ಜೊತೆ ಗಾಳಿಪಟ ಸಿನಿಮಾ ಮಾಡುವಾಗ್ಲೇ ಈ ಚಿತ್ರದ ಕಥೆ ಬರೆದಿಟ್ಟುಕೊಂಡಿದ್ದರು. ಆಗಲೇ ಪುನೀತ್ಗೆ ಕಥೆಯನ್ನೂ ಹೇಳಿದ್ದರು. ಆದರೆ, ಆ ವೇಳೆ ಈ ಸಿನಿಮಾ ಸೆಟ್ಟೇರಲಿಲ್ಲ. ಕೊನೆಗೂ ಪವನ್ ಮತ್ತೊಂದಿಷ್ಟು ಟ್ಯೂನ್ ಮಾಡಿ, ಕೆಜಿಎಫ್ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹಾಗೂ ಅಪ್ಪುಗೆ ಕಥೆ ಹೇಳಿದ್ದಾರೆ. ಇಬ್ಬರಿಗೂ ಈ ಚಿತ್ರದ ಕಥೆ ಇಷ್ಟ ಆಗಿದ್ದರಿಂದ ಈಗ ದ್ವಿತ್ವ ಅನೌನ್ಸ್ ಆಗಿದೆ.
ಇಷ್ಟು ವರ್ಷ ಹೆಣೆದ ಕಥೆಯಲ್ಲಿ ಏನಿದೆ? ಈ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತೆ. ದ್ವಿತ್ವ ಇದೊಂದು ಸಂಸ್ಕೃತ ಪದ. ಎರಡು ವ್ಯಕ್ತಿತ್ವ ಹಲವು ಮಜಲುಗಳನ್ನು ಈ ಸಿನಿಮಾ ಮೂಲಕ ಪವನ್ ಹೇಳೋಕೆ ಹೊರಟಿದ್ದಾರೆ. ಹಾಗಾಗಿ ಒಂದೊಂದು ಸೈಕಾಲಜಿಕಲ್ ಸಿನಿಮಾ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ ಈ ಸಿನಿಮಾ ಹೊಸದು. ಹಿಂದೆಂದೂ ಇಂತಹ ಅವತಾರದಲ್ಲಿ ಅಪ್ಪು ಕಾಣಿಸಿಕೊಂಡಿಲ್ಲ. ದ್ವಿತ್ವದ ಪೋಸ್ಟರ್ ಈಗಾಗ್ಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಹೀಗಾಗಿ ಈ ಜೋಡಿ ಪ್ರೇಕ್ಷಕರಿಗೆ ಟ್ರೆಂಡ್ ಹುಟ್ಟಾಕುವ ಸಿನಿಮಾ ನೀಡೋದ್ರಲ್ಲಿ ಡೌಟೇ ಇಲ್ಲ.
ದ್ವಿತ್ವ ಸಿನಿಮಾ ಸೆಪ್ಟೆಂಬರ್ನಲ್ಲಿ ಸೆಟ್ಟೇರಲಿದ್ದು, 2022ರಲ್ಲಿ ಈ ಸಿನಿಮಾ ಬಿಡುಗಡೆ ಮಾಡೋಕೆ ಚಿಂತನೆ ನಡೆಸಿದೆ. ಸದ್ಯಕ್ಕೀಗ ಕೇವಲ ಟೈಟಲ್ ಆನೌನ್ಸ್ ಮಾಡಿದ್ದು, ಅಪ್ಪು ಅಭಿಮಾನಿಗಳು ಕುತೂಹಲದಿಂದ ಎದುರು ನೋಡ್ತಿದ್ದಾರೆ. ಇದೂವರೆಗೂ ಅಪ್ಪು ಸಿನಿಮಾಗಳನ್ನು ನೋಡಿರೋ ಅಭಿಮಾನಿಗಳಿಗೆ ದ್ವಿತ್ವ ವಿಭಿನ್ನ ಅನುಭವ ನೀಡಲಿದೆ. ಟೈಟಲ್ ಕೆಲವು ಪುನೀತ್ ಫ್ಯಾನ್ಸ್ಗೆ ಇಷ್ಟ ಆಗಿಲ್ಲ ಅನ್ನೋದು ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ. ಆದರೆ, ಕಥೆಗೆ ತಕ್ಕಂತೆ ನಿರ್ದೇಶಕರು ಟೈಟಲ್ ಇಟ್ಟಿದ್ದು, ಸಿನಿಮಾ ಪ್ರೇಕ್ಷಕರನ್ನು ಹೊಸ ಅನುಭವ ನೀಡಲಿದೆ.