ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ 18 ವರ್ಷ ಮೇಲ್ಪಟ್ಟ ಎಲ್ಲರೂ ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಇದೀಗ ಚಿತ್ರರಂಗದ ಗಣ್ಯರು ವ್ಯಾಕ್ಸಿನ್ ಪಡೆದುಕೊಳ್ತಿದ್ದು, ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಸೂಜಿ ಚುಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪ್ರಶಾಂತ್ ನೀಲ್ ವ್ಯಾಕ್ಸಿನ್ ತೆಗೆದುಕೊಳ್ಳುವಾಗ ಕ್ಲಿಕ್ಕಿಸಿರೋ ಫೋಟೋದಲ್ಲಿ ಮುಖ ಮುಚ್ಚಿಕೊಂಡು ಪಕ್ಕಕ್ಕೆ ತಿರುಗಿದ್ದಾರೆ. ಇದೇ ವಿಚಾರವಾಗಿ ಕೆಜಿಎಫ್ 2 ಡೈರೆಕ್ಟರ್ ಮಾಡಿದ ಪೋಸ್ಟ್ಗೆ ಸಾಕಷ್ಟು ಫನ್ನಿ ಕಮೆಂಟ್ಗಳು ಬರ್ತಿವೆ.
ಫೋಟೋ ನೋಡಿ ಕೆಲವರು ‘ಏನ್ ಸಾರ್, ಎಂಥಾ ದೊಡ್ಡ ಆ್ಯಕ್ಷನ್ ಸಿನಿಮಾ ಮಾಡ್ತೀರಾ, ಸಣ್ಣ ಸೂಜಿಗೆ ಹೆದರಿ ಮಕ್ಕಳಂತೆ ಭಯಪಡುತ್ತಿದ್ದೀರಾ?’ ಅಂದ್ರೆ, ಮತ್ತೆ ಕೆಲವರು ‘ವ್ಯಾಕ್ಸಿನ್ ಹಾಕುವ ನರ್ಸ್ ನೋಡಿ ಡೈರೆಕ್ಟರ್ ನಾಚಿಕೊಂಡಿದ್ದಾರೆ’ ಅಂತ ಕಾಲೆಯುತ್ತಿದ್ದಾರೆ. ಮತ್ತೊಬ್ಬರು ‘ಸೂಜಿ ಚುಚ್ಚಿದ್ದು ಕೈಗೆ, ಮುಖ ಯಾಕೆ ಮುಚ್ಚಿಕೊಂಡಿದ್ದೀರಾ’ ಅಂತ ಕಮೆಂಟ್ ಮಾಡಿದ್ದಾರೆ.
ಕೆಜಿಎಫ್ 2 ರಮಿಕಾ ಸೇನ್ ಅಲಿಯಾಸ್ ರವೀನಾ ಟಂಡನ್ ಸಹ ಕಮೆಂಟ್ ಮಾಡಿದ್ದು, ‘ಹ್ಹ..ಹ್ಹ. ತುಂಬಾ ಕ್ಯೂಟ್ ಆಗಿದೆ. ನಾನು ವ್ಯಾಕ್ಸಿನ್ ತಗೊಂಡ ವೀಡಿಯೋ ನೀವು ನೋಡ್ಬೇಕಿತ್ತು’ ಅಂತ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರೋ ಪ್ರಶಾಂತ್ ನೀಲ್, ಆ ವೀಡಿಯೋ ನೋಡ್ಬೇಕು ಅಂತ ರಿಪ್ಲೇ ಮಾಡಿದ್ದಾರೆ. ಒಟ್ನಲ್ಲಿ ಪ್ರಶಾಂತ್ ನೀಲ್ ವ್ಯಾಕ್ಸಿನ್ ಪೋಸ್ಟ್ಗೆ ಕಮೆಂಟ್ ಬಾಕ್ಸ್ ಫುಲ್ ಆಗಿದ್ದು, ನೆಟ್ಟಿಗರಿಗೆ ಸಖತ್ ಮಜಾ ಕೊಡ್ತಿದೆ.
‘ಎದೆ ನಡುಗಿಸುವ ದೃಶ್ಯಗಳನ್ನ ಕಟ್ಟಿಕೊಡ್ತಿರಾ, ಇಂಜೆಕ್ಷನ್ಗೆ ಭಯ ಪಡೋದಾ’ ? ‘ಮಚ್ಚು ಅಲ್ಲ, ಕೊಡಲಿ ಅಲ್ಲ, ಸುತ್ತಿಗೆ ಅಂತೂ ಅಲ್ಲವೇ ಅಲ್ಲ.. ಒಂದು ಸೂಜಿಗೆ ಇಷ್ಟು ಭಯನಾ’ ? ಪೋಸ್ ಚೆನ್ನಾಗಿದೆ’ ಅಂತೆಲ್ಲಾ ಕಮೆಂಟುಗಳ ಮಳೆಯನ್ನೇ ಸುರಿಸಿದ್ದಾರೆ.