ಲಾಕ್ಡೌನ್ನಲ್ಲಿ ಲಾಕ್ ಆಗೋರಿಗೆ ಲೆಕ್ಕವಿಲ್ಲ ಬಿಡಿ. ಸಿನಿಮಾ ಸೆಲೆಬ್ರಿಟೀಸ್ ಕೂಡ ಸದ್ದಿಲ್ಲದೇ ಹೊಸಬಾಳಿಗೆ ಕಾಲಿಡ್ತಿದ್ದಾರೆ. ಇತ್ತೀಚೆಗೆ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಕದ್ದುಮುಚ್ಚಿ ಮದುವೆ ಆಗಿದ್ದಾರೆ ಅನ್ನೋ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿತ್ತು. ಕನಕಪುರ ರಸ್ತೆಯ ರೆಸಾರ್ಟ್ ವೊಂದರಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಪ್ರಣೀತಾ ಹಸೆಮಣೆ ಏರಿದ್ದಾರೆ ಅಂತ ವೆಬ್ ಸೈಟ್ ಒಂದು ಸುದ್ದಿ ಪ್ರಕಟಿಸಿತ್ತು. ಅದು ವೈರಲ್ ಆಗ್ತಿದಂತೆ ಮಾಧ್ಯಮದವರೆಲ್ಲಾ ಪ್ರಣೀತಾಗೆ ಫೋನ್ ಮಾಡಿ ಏನ್ ಮೇಡಂ, ಮದುವೆ ಆದ್ರಂತೆ ನಿಜಾನಾ? ಅಂತ ಪತ್ರಕರ್ತರು ಫೋನ್ ಮಾಡೋಕೆ ಶುರುಮಾಡಿದ್ರು. ಪ್ರಣೀತಾ ಕೂಡ ಆ ಸುದ್ದಿ ಓದಿ ಯಾರಪ್ಪ ಬರೆದವರು, ಅಂತ ಆ ವೆಬ್ ಸೈಟ್ ನವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಸುಖಾ ಸುಮ್ಮನೆ ಹಿಂಗೆಲ್ಲಾ ಬರೀಬೇಡಿ ಅಂತ ಅವರಿಗೆ ಹೇಳಿದ್ದಾರೆ.
ನಾವು ಕೂಡ ಪ್ರಣೀತಾ ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದ್ವಿ. ಅವರು ಫೋನ್ ತೆಗೆದವರೇ ಗೊತ್ತಾಯ್ತು, ಅದೇ ವೆಬ್ ಸೈಟ್ ನ್ಯೂಸ್ ತಾನೇ, ನನ್ ಮದುವೆ ಮ್ಯಾಟರ್ ತಾನೇ, ಅದೆಲ್ಲಾ ಸುಳ್ಳು. ದೊಡ್ಡ ಉದ್ಯಮ ರಾಜೀವ್ ಕ್ಷತಿಯ ಅನ್ನುವವರನ್ನ ಮದುವೆ ಆಗಿದ್ದೀನಿ ಅಂತ ಬರೆದಿದ್ದಾರೆ.ಆ ವ್ಯಕ್ತಿ ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವ್ಯಕ್ತಿ ಜೊತೆ ಮದುವೆ ಹೇಗೆ ಸಾಧ್ಯ. ಇದು ಬರೀ ಗಾಳಿಸುದ್ದಿ ಅಷ್ಟೇ. ಒಂದು ವೇಳೆ ಮದುವೆ ಆದ್ರು, ಎಲ್ಲರಿಗೂ ಹೇಳಿ ಆಗ್ತೀನಿ. ನಾನ್ಯಾಕೆ ಕದ್ದುಮುಚ್ಚಿ ಮದುವೆ ಆಗಲಿ ಅಂದಿದ್ದಾರೆ.
‘ಪೊರ್ಕಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಪ್ರಣೀತಾ ಸುಭಾಷ್ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಕನ್ನಡದ ರಾಮನ ಅವತಾರ ಚಿತ್ರದಲ್ಲಿ ಪ್ರಣೀತಾ ನಟಿಸಿದ್ದು, ಸದ್ಯ ಬಾಲಿವುಡ್ ನ ಹಂಗಾಮ -2 ಬಿಡುಗಡೆಗಾಗಿ ಕಾಯ್ತಿದ್ದಾರೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ.