ಕ್ರೇಜಿ ಸ್ಟಾರ್ ರವಿಚಂದ್ರನ್ ಫ್ಯಾಮಿಲಿ ಜೊತೆ ಸೇರಿ ಸಖತ್ತಾಗಿರುವ ಪ್ಲಾನ್ ಮಾಡಿದ್ರು. ಆ ಪ್ಲಾನ್ ಅದೆಷ್ಟು ಅದ್ಭುತವಾಗಿ ವರ್ಕೌಟ್ ಆಗಿತ್ತು ಅಂದ್ರೆ ತಿಂಗಳುಗಟ್ಟಲೆ ಕನ್ನಡಿಗರೆಲ್ಲಾ ಅದರ ಬಗ್ಗೆಯೇ ಮಾತನಾಡ್ತಾ ಇದ್ದರು. ಈಗ ಒಂದಷ್ಟು ವರ್ಷದ ನಂತರ ಆ ಪ್ಲಾನ್ ಬಗ್ಗೆ ಯಾಕೋ ಡೌಟ್ ಬಂದು ಹೊಸಾ ಪ್ಲಾನ್ ಮಾಡ್ತಿದ್ದಾರೆ ರವಿ ಮಾಮ. ಆದ್ರೆ ಅದಕ್ಕೆ ಅಡ್ಡಗಾಲು ಹಾಕೋಕೆ ಅಂತಲೇ ಕಾದು ಕುಳಿತಿದ್ದಾರಂತೆ ಪ್ರಮೋದ್ ಶೆಟ್ಟಿ. ರವಿಚಂದ್ರನ್ ಮೇಲೆ ಪ್ರಮೋದ್ ಶೆಟ್ಟಿಗ್ಯಾಕೆ ಈ ಪರಿಯ ಜಿದ್ದು? ಇವ್ರಿಬ್ರ ನಡುವಿನ ಜಟಾಪಟಿ ಏನು? ಮುಂದೆ ಓದಿ…


ಅಂದ್ಹಾಗೆ ಇದೆಲ್ಲಾ ದೃಶ್ಯಂ ಕರಾಮತ್ತು. ಬರೋಬ್ಬರಿ ಏಳು ವರ್ಷಗಳ ಹಿಂದೆ ತೆರೆ ಕಂಡಿದ್ದ ಮಲಯಾಳಂ ಚಿತ್ರದ ಕನ್ನಡ ರೀಮೇಕ್ ಚಿತ್ರ ದೃಶ್ಯಂ ಭಾರೀ ಸುದ್ದಿಯಲ್ಲಿತ್ತು. ಅದರಲ್ಲಿ ಮುಖ್ಯ ಪಾತ್ರ ವಹಿಸಿದ್ದ ರವಿಚಂದ್ರನ್ ರಾಜೇಂದ್ರ ಪೊನ್ನಪ್ಪ ಎನ್ನುವ ಪಾತ್ರ ಮಾಡಿದ್ರು. ತನ್ನ ಕುಟುಂಬಕ್ಕೆ ಎರಗಿದ ಸಂಕಷ್ಟವೊಂದರಿಂದ ಬಚಾವಾಗೋಕೆ ಅದ್ಭುತವಾಗಿ ಸಂಚು ರೂಪಿಸೋ ಒಬ್ಬ ಸಾಮಾನ್ಯ ಕುಟುಂಬಸ್ಥನ ಕಥೆ ಅದು. ಇಷ್ಟು ವರ್ಷಗಳ ನಂತರ ಮಲಯಾಳಂ ಚಿತ್ರ ದೃಶ್ಯಂ ಮುಂದಿನ ಭಾಗವಾಗಿ ದೃಶ್ಯಂ 2 ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈಗಾಗಲೇ ನಾನಾ ಭಾಷೆಗಳಿಗೆ ರೀಮೇಕ್ ರೈಟ್ಸ್ ಸೇಲ್ ಆಗಿದ್ದು ಅಲ್ಲೆಲ್ಲಾ ಚಿತ್ರದ ಕೆಲಸ ಶುರುವಾಗಿದೆ.


ಕೇವಲ ಅಮೆಜಾನ್ ಪ್ರೈಮ್ನಲ್ಲಿ ಮಾತ್ರವೇ ನೇರವಾಗಿ ರಿಲೀಸ್ ಆಗಿರುವ ಮಲಯಾಳಂನ ದೃಶ್ಯಂ 2 ಸೂಪರ್ ಹಿಟ್ ಆಗಿದೆ. ಏಳು ವರ್ಷದ ಹಿಂದಿನ ಕಥೆಗೇ ಬೇರೆ ರೂಪದೊಂದಿಗೆ ತೆರೆ ಮೇಲೆ ತಂದಿದೆ ಮಲಯಾಳಂ ತಂಡ. ಈಗ ಕನ್ನಡದಲ್ಲೂ ಆ ಕಥೆ ಹೇಳೋಕೆ ಮೂಲ ದೃಶ್ಯಂ ತಂಡ ತಯಾರಾಗಿದೆ. ರಾಜೇಂದ್ರ ಪೊನ್ನಪ್ಪ ತನ್ನ ಕುಟುಂಬದ ಜೊತೆ ಮತ್ತೆ ಬರಲಿದ್ದಾರೆ. ಮೊದಲ ಅವತರಣಿಕೆ ನಿರ್ದೇಶಿಸಿದ್ದ ಪಿ ವಾಸು ಎರಡನೆಯದಕ್ಕೂ ಆಕ್ಷನ್ ಕಟ್ ಹೇಳ್ತಿದ್ದಾರೆ. ಚಿತ್ರದ ತಾರಾಗಣ ಬಹುತೇಕ ಮೊದಲಿನ ಭಾಗದ್ದೇ ಮುಂದುವರೆಯಲಿದೆ. ಆದ್ರೆ ಅದರ ಜೊತೆಗೆ ಮತ್ತಷ್ಟು ಹೊಸಾ ಪಾತ್ರಗಳು ಸೇರಿಕೊಳ್ಳುತ್ತಿವೆ.


ದೃಶ್ಯಂ 2ನಲ್ಲಿ ಖ್ಯಾತ ಪೋಷಕ ನಟ ಪ್ರಮೋದ್ ಶೆಟ್ಟಿ ನಟಿಸಲಿದ್ದಾರೆ. ಮೂಲ ಮಲಯಾಲಂ ಚಿತ್ರದಲ್ಲಿ ನಟ ಮುರಳಿ ಗೋಪಿ ನಿರ್ವಹಿಸಿದ್ದ ಬುದ್ಧಿವಂತ ಪೋಲಿಸ್ ಅಧಿಕಾರಿಯ ಪಾತ್ರವನ್ನು ಕನ್ನಡದಲ್ಲಿ ಪ್ರಮೋದ್ ಶೆಟ್ಟಿ ನಿರ್ವಹಿಸಲಿದ್ದಾರೆ. ದೃಶ್ಯಂ 2ನ ಕಥೆಗೆ ಮೂಲ ಕಾರಣವೇ ಆ ಪೋಲಿಸ್ ಅಧಿಕಾರಿಯ ಪಾತ್ರ. ಹಾಗಾಗಿ ಪ್ರಮೋದ್ ಪಾತ್ರ ಸಾಕಷ್ಟು ಗಟ್ಟಿಯಾಗಿದೆ. ಅಲ್ಲದೇ ಇದೇ ಮೊದಲ ಬಾರಿಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆಗೆ ನಟಿಸುವ ಬಗ್ಗೆ ಪ್ರಮೋದ್ ಕೂಡಾ ಸಾಕಷ್ಟು ಎಕ್ಸೈಟ್ ಆಗಿದ್ದಾರಂತೆ. ಒಟ್ನಲ್ಲಿ ರಾಜೇಂದ್ರ ಪೊನ್ನಪ್ಪ ವರ್ಸಸ್ ಪ್ರಮೋದ್ ಶೆಟ್ಟಿ ನಡುವಿನ ಜಟಾಪಟಿ ಹೇಗಿರುತ್ತೆ ಅನ್ನೋದನ್ನ ಪ್ರೇಕ್ಷಕರು ಕುತೂಹಲದಿಂದಲೇ ಕಾಯುತ್ತಿದ್ದಾರೆ. ಕೊರೊನಾ ಆರ್ಭಟ ಕಡಿಮೆಯಾದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.